ಗ್ಲಾಸ್​ ಹೌಸ್​ ಉದ್ಯಾನದಲ್ಲಿ ಮಂಗನ ಕಾಟ..!

H25 Glass House Monkey 1
Published on

ಹುಬ್ಬಳ್ಳಿ: ಇಲ್ಲಿನ ಇಂದಿರಾ ಗಾಜಿನ ಮನೆ ಮತ್ತು ಉದ್ಯಾನ ವನದಲ್ಲಿ ಒಂದು ತಿಂಗಳಿಂದ ಮಂಗನ ಕಾಟ ಹೆಚ್ಚಾಗಿದೆ. ಅದರಲ್ಲೂ ಒಂದು ಮಂಗ, ಪುಟ್ಟ ಮಕ್ಕಳ ಮೇಲೆ ಎರಗುತ್ತಿರುವುದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ.
ಪ್ರತಿದಿನ ಬೆಳಗ್ಗೆ, ಸಂಜೆ ವಾಯು ವಿಹಾರ ಮಾಡಲೆಂದು ಉದ್ಯಾನವನಕ್ಕೆ ನೂರಾರು ಜನ ಬರುತ್ತಾರೆ. ಮಕ್ಕಳು ಪಾಲಕರೊಂದಿಗೆ ಆಟ ಆಡಲು ಆಗಮಿಸುತ್ತಾರೆ. ಇಲ್ಲಿ ಸ್ಕೇಟಿಂಗ್​ ಮೈದಾನ ಇರುವುದರಿಂದ ಸ್ಕೇಟಿಂಗ್​ ಕಲಿಯಲು ಮಕ್ಕಳು ಬರುತ್ತಾರೆ. ಹೀಗೆ ಉದ್ಯಾನಕ್ಕೆ ಬರುವ ಮಕ್ಕಳನ್ನೇ ಮಂಗವೊಂದು ಟಾರ್ಗೆಟ್​ ಮಾಡಿದೆ. ಓಡಿ ಹೋಗುವ ಮತ್ತು ಸ್ಕೇಟಿಂಗ್​ ಮಾಡುವ ಮಕ್ಕಳನ್ನು ಬೆನ್ನಟ್ಟಿ ಅವರ ಮೇಲೆ ಮಂಗ ಎರಗುತ್ತಿದೆ. ಮಕ್ಕಳ ಮೇಲೆ ಎರಗಿ ಗಟ್ಟಿಯಾಗಿ ಹಿಡಿದುಕೊಳ್ಳುತ್ತಿದೆ. ಇದರಿಂದ ಉದ್ಯಾನಕ್ಕೆ ಬರುವ ಮಕ್ಕಳು ಭಯಭೀತರಾಗಿದ್ದಾರೆ.
ಪಾಲಿಕೆ ನಿರ್ಲಕ್ಷ ಆರೋಪ
ಉದ್ಯಾನದಲ್ಲಿ ಹಲವು ದಿನಗಳಿಂದ ಮಂಗನ ಕಾಟ ಹೆಚ್ಚಾಗಿದೆ. ಮಂಗನ ಕಾಟದಿಂದ ಬೇಸತ್ತ ಕೆಲ ಮಕ್ಕಳು ಸ್ಕೇಟಿಂಗ್​ ಅಭ್ಯಾಸಕ್ಕೆ ಬರುವುದನ್ನೇ ಬಿಟ್ಟಿದ್ದಾರೆ ಎಂದು ಸ್ಕೇಟಿಂಗ್​ ತರಬೇತುದಾರ ಮಲ್ಲಿಕಾರ್ಜುನ ಕಾಡಪ್ಪನವರ ಹೇಳಿದರು. ಮಂಗನ ಕಾಟದ ಬಗ್ಗೆ ಪಾಲಿಕೆ ಗಮನಕ್ಕೆ ತಂದಿದ್ದರೂ ಈವರೆಗೆ ಪ್ರಯೋಜನವಾಗಿಲ್ಲ ಎಂದು ಸ್ಥಳಿಯರು ದೂರಿದ್ದಾರೆ.

ಮಕ್ಕಳಿಗೆ ಕಾಟ ಕೊಡುತ್ತಿರುವ ಮಂಗನನ್ನು ಹಿಡಿಯಲು ಈ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ತೋಟಗಾರಿಕೆ ಇಲಾಖೆ ಸಹಾಯದೊಂದಿಗೆ ಶುಕ್ರವಾರ ಮಂಗನನ್ನು ಹಿಡಿಯುವವರನ್ನು ಕರೆಸಿ ಕಾರ್ಯಾಚರಣೆ ನಡೆಸಲಾಗುವುದು.> ನಾಗರಾಜ ಕೆ., ಸಹಾಯಕ ಆಯುಕ್ತ, ಪಾಲಿಕೆ ವಲಯ- 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net