

ಬೂದಿಕೋಟೆ: ಕೋಡಗುರ್ಕಿ ಗ್ರಾಮದಲ್ಲಿ ಕೆಮ್ಮಿನಿಂದ ಬಳಲುತ್ತಿರುವ ಕೋತಿಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಕೊಳೆತ ಬಾಳೆ ಹಣ್ಣು ನೀಡುತ್ತಿದ್ದು, ರೋಗ ಉಲ್ಬಣಿಸುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಬಂಗಾರಪೇಟೆ ತಾಲೂಕು ಬೂದಿಕೋಟೆ ಹೋಬಳಿಯ ಕೊಡಗುರ್ಕಿಯಲ್ಲಿ 30ಕ್ಕೂ ಹೆಚ್ಚು ಕೋತಿಗಳು ಕೆಮ್ಮಿನಿಂದ ನಿತ್ರಾಣಗೊಂಡಿವೆ. ಅನಾರೋಗ್ಯದಿಂದಿರುವ ಕೋತಿಗಳಿಗೆ ಪಶು ಇಲಾಖೆ ವೈದ್ಯರು ರೋಗ ನಿರೋಧಕ ಔಷಧ ನೀಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಂಗಗಳಿಗೆ ನೀಡಲು ಕೊಳೆತ ಬಾಳೆಹಣ್ಣುಗಳನ್ನು ಮಾಲೂರು ವಲಯ ಅರಣ್ಯಾಧಿಕಾರಿಗಳು ಕಳಿಹಿಸಿರುವುದು ಎಷ್ಟರಮಟ್ಟಿಗೆ ಸರಿ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಗಾಗಲೆ ಕರೊನಾ ಮತ್ತು ಕೋತಿಗಳಲ್ಲಿ ಉಂಟಾದ ಅನಾರೋಗ್ಯದಿಂದ ಭಯದ ವಾತಾವರಣ ನಿರ್ಮಾಣವಾಗಿದೆ. ತಿನ್ನಲು ಯೋಗ್ಯವಲ್ಲದ ಬಾಳೆಹಣ್ಣುಗಳನ್ನು ಸೋಂಕಿನಿಂದ ಬಳಲುತ್ತಿರುವ ಕೋತಿಗಳಿಗೆ ನೀಡಿದರೆ ಆರೋಗ್ಯ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಡಗುರ್ಕಿ ಗ್ರಾಮದ ಕೋತಿಗಳಲ್ಲಿ ಕೆಮ್ಮು ಇರುವ ಕಾರಣ ಪಚ್ಚಬಾಳೆ ಬದಲು ಏಲಕ್ಕಿ ಬಾಳೆಹಣ್ಣು ನೀಡಲಾಗಿದೆ. ಬಿಸಿಲ ತಾಪದಿಂದ ಸಿಪ್ಪೆ ಕಪ್ಪಾಗಿದೆ ಅಷ್ಟೆ. ಬೇರೆ ಹಣ್ಣುಗಳನ್ನು ವಿತರಣೆ ಮಾಡಲು ಸಿಬ್ಬಂದಿಗೆ ತಿಳಿಸಲಾಗಿದೆ.
ಸುಧಾಕರ್, ಆರ್‌ಎಫ್‌ಒ ಅರಣ್ಯ ಇಲಾಖೆ ಮಾಲೂರು