

ಲಕ್ಕೂರು: ಲಕ್ಕೂರು ಗ್ರಾಮದಲ್ಲಿ ನೀರು ಹಾಗೂ ಆಹಾರ ಸಿಗದೆ 10ಕ್ಕೂ ಹೆಚ್ಚು ಕೋತಿಗಳು ಮೃತಪಟ್ಟ ವಿಷಯ ತಿಳಿದ ಸಾರ್ವಜನಿಕರು ಔಷಧ ಜತೆಗೆ ಆಹಾರ ನೀಡುತ್ತಿದ್ದಾರೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಸ್ ನಿಲ್ದಾಣದಲ್ಲಿರುವ ಬಹುತೇಕ ಅಂಗಡಿ ಬಂದ್ ಮಾಡಿದ್ದರಿಂದ ಕೋತಿಗಳಿಗೆ ಆಹಾರ ಸಿಗುತ್ತಿಲ್ಲ. ಸಾರ್ವಜನಿಕರು ಕೋತಿಗಳಿಗೆ ಆಹಾರ ಹಾಗೂ ನೀರು ನೀಡದ ಕಾರಣ ತಿಂಗಳಿಂದ ಕೋತಿಗಳು ಬಸ್ ನಿಲ್ದಾಣ ಸಮೀಪ ಬೀಡುಬಿಟ್ಟಿವೆ.
ಪಶು ಇಲಾಖೆ ವೈದ್ಯಾಧಿಕಾರಿ ಡಾ.ನಾರಾಯಣಸ್ವಾಮಿ, ಅರಣ್ಯ ಇಲಾಖೆ ಸಿಬ್ಬಂದಿ ರಾಮಕೃಷ್ಣಪ್ಪ, ರಮೇಶ್‌ಗೆ ಈ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದರು. ಸ್ಥಳಕ್ಕೆ ಭೇಟಿ ನೀಡಿದ ವೈದ್ಯರು ಬಳಲಿದ್ದ ಕೋತಿಗಳಿಗೆ ಚಿಕಿತ್ಸೆ ನೀಡಿದರು.
ಹವಾಮಾನ ವೈಪರೀತ್ಯದಿಂದ ಬಿಸಿಲಿನ ತಾಪ ಹಾಗೂ ಆಹಾರ ಸಿಗದೆ ಇಂತಹ ಪರಿಸ್ಥಿತಿ ಉಂಟಾಗಿದೆ. ಮಂಗನ ಕಾಯಿಲೆ ಯಾವುದೇ ಲಕ್ಷಣವಿಲ್ಲ. ಸಾರ್ವಜನಿಕರು ಕೋತಿಗಳಿಗೆ ಆಹಾರ ಹಾಗೂ ಕುಡಿವ ನೀರಿನ ವ್ಯವಸ್ಥೆ ಮಾಡಬೇಕು ಎಂದರು.