ಕೆಮ್ಮಿನಿಂದ ಮಂಗಗಳು ನಿತ್ರಾಣ, ಮಂಗನ ಕಾಯಿಲೆ ಭೀತಿಯಿಂದ ಗ್ರಾಮಸ್ಥರು

20200424_090642
Published on

ಬೂದಿಕೋಟೆ: ಕೋಡಗುರ್ಕಿ ಗ್ರಾಮದಲ್ಲಿ ಸುಮಾರು 30 ಕೋತಿಗಳು ಅತಿಯಾದ ಕೆಮ್ಮಿನಿಂದ ನಿತ್ರಾಣಗೊಂಡಿದ್ದು, ಮಂಗನ ಕಾಯಿಲೆ ಭೀತಿಯಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಬಂಗಾರಪೇಟೆ ತಾಲೂಕು ಬೂದಿಕೋಟೆ ಹೋಬಳಿಯ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಕೋತಿಗಳು ಬೀಡುಬಿಟ್ಟಿದ್ದು. ವಾರದಿಂದ ಆಹಾರ ಹಾಗೂ ನೀರು ಸೇವಿಸದೆ ಮನೆಗಳು ಹಾಗೂ ಮರದ ಕೊಂಬೆಗಳ ಮೇಲೆ ಅಸ್ವಸ್ಥಗೊಂಡ ರೀತಿ ಮಲಗಿವೆ. ಇನ್ನೂ ಕೆಲವು ಮನೆಗಳ ಸುತ್ತ ಓಡಾಡುತ್ತಿದ್ದು, ಗ್ರಾಮಸ್ಥರು ಮಂಗನ ಕಾಯಿಲೆ ಭೀತಿಯಲ್ಲಿದ್ದಾರೆ. ಕೋತಿಗಳನ್ನು ಹಿಡಿದು ಪರೀಕ್ಷೆಗೆ ಒಳಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಅಧಿಕಾರಿಗಳು ಭೇಟಿ: ಅರಣ್ಯ ಇಲಾಖೆ ಹಾಗೂ ಪಶು ಇಲಾಖೆ ಸಿಬ್ಬಂದಿ ಪರಿಶೀಲಿಸಿದ್ದಾರೆ. 5 ದಿನ ಆ್ಯಂಟಿ ಬಯೋಟಿಕ್ ಔಷಧ ನೀಡದರೆ ಸಾಮಾನ್ಯ ಸ್ಥಿತಿಗೆ ಮರಳುತ್ತವೆ ಎಂದು ಗ್ರಾಮಸ್ಥರಿಗೆ ಧೈರ್ಯ ತುಂಬಿದ್ದಾರೆ. ಎಲೆಸಂದ್ರ ಗ್ರಾಪಂ ಪಿಡಿಒ ವಸಂತ್‌ಕುಮಾರ್, ಅರಣ್ಯ ಇಲಾಖೆ ಆಧಿಕಾರಿ ವಿದ್ಯಾ ಮತ್ತಿತರರು ಇದ್ದರು.

ಕೋತಿಗಳಿಗೆ ಮಂಗನ ಕಾಯಿಲೆ ಲಕ್ಷಣಗಳಿಲ್ಲ. ಸಮಯಕ್ಕೆ ಸರಿಯಾಗಿ ಆಹಾರವಿಲ್ಲದೆ ನಿತ್ರಾಣವಾಗಿರಬಹುದು ಅಥವಾ ಬೆಳೆಗಳಿಗೆ ಕ್ರಿಮಿನಾಶಕ ಸಿಂಪಡಣೆ ಮಾಡಿದ ನಂತರ ಅಲ್ಲಿನ ತರಕಾರಿ ಸೇವಿಸಿದ್ದರಿಂದ ಈ ರೀತಿ ಆಗಿರಬಹುದು. ಗ್ರಾಮಸ್ಥರು ಭಯಪಡುವ ಅಗತ್ಯ ಇಲ್ಲ. ಡಾ.ಪ್ರದೀಪ್ ಕುಮಾರ್, ಪಶು ವೈದ್ಯಾಧಿಕಾರಿ, ಬೂದಿಕೋಟೆ ಕೋತಿಗಳಲ್ಲಿ ಕಂಡು ಬಂದಿರುವ ಕೆಮ್ಮಿನಿಂದ ಮಂಗನ ಕಾಯಿಲೆ ಬಂದಿರಬಹುದು ಎಂಬ ಭಯ ಇದೆ. ಕೋತಿಗಳಿಗೆ ಯಾವುದೇ ಆಹಾರ ನೀಡಿದರೂ ಸೇವಿಸುತ್ತಿಲ್ಲ. ಕೂಡಲೆ ಕೋತಿಗಳನ್ನು ಪರೀಕ್ಷಿಸಬೇಕು. ಕೃಷ್ಣಮೂರ್ತಿ, ಕೋಡಗೂರ್ಕಿ ಗ್ರಾಮಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net