

ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ
ಮನೆಗೆ ನುಗ್ಗಿದ ಕೋತಿಯೊಂದು ಮೇಜಿನ ಮೇಲಿಟ್ಟಿದ್ದ ಐಪೋನ್‌ನನ್ನು ಎತ್ತಿಕೊಂಡು ಹೊರ ಓಡಿದೆ, ಪೋನ್ ಎತ್ತೋಯ್ದ ದೃಶ್ಯ ಕಂಡು ಪೋನ್‌ನ ಒಡತಿ ಕೋತಿ ಹಿಂಬಾಲಿಸಿದ್ದಾರೆ ಆದರೆ ಸೆಲ್‌ಪೋನ್ ಎತ್ತಿಕೊಂಡು ಸೀದಾ ಮೊಬೈಲ್ ಟವರ್ ಏರಿದ ಕೋತಿ ತಾಸುಗಟ್ಟಲೆ ಸೆಲ್‌ಪೋನ್‌ನೊಂದಿಗೆ ಮಂಗಾಟವಾಡಿದೆ. ಮಹಿಳೆ ಪೇಜಾಡುತ್ತಿದ್ದರೆ ಕೋತಿ ಪೋನ್‌ನೊಂದಿಗೆ ಮಂಗಾಟವಾಡುತ್ತಿದ್ದ ದೃಶ್ಯ ಸ್ಥಳೀಯರಿಗೆ ಪುಕ್ಕಟೆ ಮನರಂಜನೆ ನೀಡಿದೆ.
ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಗ್ರಾಮದಲ್ಲಿ ಇಂಥಹದೊದ್ದು ಪ್ರಸಂಗ ನಡೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರವಿರುವ ತೂಬಗೆರೆ ಹೋಬಳಿಯ ತೂಬಗೆರೆ ಗ್ರಾಮದಲ್ಲಿ ಕೋತಿಗಳ ಕಾಟ ವಿಪರೀತವಾಗಿದ್ದು ಮನೆಯೊಳಗೆ ನುಗ್ಗಿ ವಸ್ತುಗಳನ್ನು ಹೊತ್ತೊಯ್ಯುವ ಪ್ರಸಂಗಗಳು ಸಾಮಾನ್ಯವಾಗಿದೆ. ಆದರೆ ತಿಂಡಿ ತಿನಿಸುಗಳಿಗೆ ಲಗ್ಗೆ ಹಾಕುತ್ತಿದ್ದ ಮಂಗಗಳು ಈ ಬಾರಿ ಸೆಲ್‌ಪೋನ್ ಮೇಲೆ ಕಣ್ಣಾಕಿದೆ. ದುಬಾರಿ ಬೆಲೆಯ ಐಪೋನ್ ಎತ್ತೊಯ್ಯಿದ್ದಲ್ಲದೆ ಮೊಬೈಲ್ ಟವರ್ ಏರಿ ತಾಸುಗಟ್ಟಲೆ ಪೋನ್‌ನೊಂದಿಗೆ ಮಂಗಾಟವಾಡಿದ ಪ್ರಸಂಗ ಸ್ಥಳೀಯರಿಗೆ ಮನರಂಜನೆ ನೀಡಿದರೆ ಪೋನ್ ಒಡತಿ ಪೇಚಿಗೆ ಸಿಲುಕಿ ಪರದಾಡಿದ ದೃಶ್ಯ ಕಂಡುಬಂದಿದೆ.
ಎಸೆದು ಓಡಿದ ಮಂಗ: ಮಂಗನ ಕೈಗೆ ಮಾಣಿಕ್ಯ ಸಿಕ್ಕಂತೆ ಎಂಬ ಗಾದೆ ಮಾತಿನಂತೆ ಸೆಲ್‌ಪೋನ್ ಹಿಡಿದ ಕೋತಿ ಅದನ್ನು ಬಿಗಿತಪ್ಪಿಕೊಂಡು ಟವರ್ ಸುತ್ತಲೂ ಓಡಾಡುತ್ತಿದ್ದರೆ ಇತ್ತ ಸ್ಥಳೀಯರು ಕೋತಿಯನ್ನು ಹೆದರಿಸಿ ಸೆಲ್ ಬಿಡಿಸಿಕೊಳ್ಳುವ ಕಸರತ್ತು ನಡೆಸಿದ್ದರು. ಕೆಲ ತಾಸಿನ ಬಳಿಕ ಏಕಾಏಕಿ ಪೋನ್ ಕೆಳಗೆಸೆದ ಕೋತಿ ಚಂಗನೆ ಮರವೊಂದಕ್ಕೆ ಹಾರಿ ಕಣ್ಮರೆಯಾಗಿದೆ. ಅಂತೂ ಕಡೆಗೆ ಪೋನ್ ಸಿಕ್ಕಿತಲ್ಲ ಎಂದು ಖುಷಿ ಪಟ್ಟ ಮಹಿಳೆ ಪೋನ್ ಎತ್ತಿ ನೋಡಿದಾಗ ಅದರ ಸ್ಕ್ರೀನ್ ಒಡೆದು ಹೋಗಿತ್ತು ಎನ್ನಲಾಗಿದೆ.