ಸ್ಕ್ಯಾನಿಂಗ್ ಕೇಂದ್ರ ನಿಗಾ ವಹಿಸಿ; ಭ್ರೂಣಹತ್ಯೆ ಗಂಭೀರವಾಗಿ ಪರಿಗಣಿಸಿ: ದಿನೇಶ್ ಗುಂಡೂರಾವ್ ಸೂಚನೆ

Monitor scanning; Take feticide seriously Dinesh Gundurao cautions
Published on

ಮಡಿಕೇರಿ:

ಕೊಡಗು ಜಿಲ್ಲೆಯಲ್ಲಿ 29 ಸ್ಕ್ಯಾನಿಂಗ್ ಕೇಂದ್ರಗಳಿದ್ದು, ಸ್ಕ್ಯಾನಿಂಗ್ ಕೇಂದ್ರಗಳಿಗೆ ಆಗಾಗ ಭೇಟಿ ನೀಡಿ ತಪಾಸಣೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್  ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. 

      ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ವಿವಿಧ ಕಾರ್ಯಗಳ ಪ್ರಗತಿ ಹಾಗೂ ಅನುಷ್ಠಾನ ಸಂಬಂಧ  ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ  ಮಾತನಾಡಿದರು. 

     ಕೆಲವು ಜಿಲ್ಲೆಯಲ್ಲಿ ಭ್ರೂಣಹತ್ಯೆ ಮಾಡುವುದು ಕೇಳಿಬರುತ್ತಿದ್ದು, ಭ್ರೂಣಹತ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು  ತಾಕೀತು ಮಾಡಿದರು. 

     ಕೊಡಗು ಜಿಲ್ಲೆಯಲ್ಲಿ ಕಳೆದ 21 ವರ್ಷದಲ್ಲಿ ಸ್ಕ್ಯಾನಿಂಗ್ ಕೇಂದ್ರಗಳ ಸಂಬಂಧ ಒಂದು ಪ್ರಕರಣವು ದಾಖಲಾಗಿಲ್ಲ. ಆ ನಿಟ್ಟಿನಲ್ಲಿ ಎಲ್ಲವೂ ಸರಿಯಿದೆಯೇ ಎಂಬುದನ್ನು ಆತ್ಮವಿಮರ್ಶೆ ಮಾಡಬೇಕಿದೆ ಎಂದರು.  

      ಈ ಕುರಿತು ಧ್ವನಿಗೂಡಿಸಿದ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ  ಸ್ಕ್ಯಾನಿಂಗ್ ಕೇಂದ್ರಗಳು ಹಾಗೂ ವೈದ್ಯಾಧಿಕಾರಿಗಳ ನಡುವೆ ಏನಾದರೂ ಸಂಬಂಧ ಇದೆಯೇ ಎಂಬ ಬಗ್ಗೆ ಸಂಶಯ ಉಂಟಾಗುತ್ತಿದೆ ಎಂದರು.

      ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೈದ್ಯಾಧಿಕಾರಿಗಳು ಸ್ಪ್ರಿಂಗ್ ಆಫರೇಶನ್ ಮೂಲಕ ಸ್ಕ್ಯಾನಿಂಗ್ ಕೇಂದ್ರಗಳ ಚಟುವಟಿಕೆ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ಜತೆಗೆ ಸಾರ್ವಜನಿಕರಿಂದಲೂ ಅಭಿಪ್ರಾಯ ಪಡೆಯುವಂತಾಗಬೇಕು. ‘ಲಿಂಗ ಆಯ್ಕೆ ನಿಷೇಧ’ವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು ಎಂದು ದಿನೇಶ್ ಗುಂಡೂರಾವ್  ನಿರ್ದೇಶನ ನೀಡಿದರು.  

     ಸ್ಕ್ಯಾನಿಂಗ್ ಕೇಂದ್ರಗಳು ಅಧಿಕೃತವಾಗಿ ನೋಂದಣಿಯಾಗಿರಬೇಕು. ಅನಧಿಕೃತ ಸ್ಕ್ಯಾನಿಂಗ್ ಕೇಂದ್ರಗಳು ನಡೆಯಬಾರದು ಎಂದರು.

      ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಕೊಡಗು ಜಿಲ್ಲೆಯಲ್ಲಿ ಲಿಂಗಾನುಪಾತವು 978 ಇದೆ ಎಂದು ಮಾಹಿತಿ ನೀಡಿದರು. 

     ಪೊನ್ನಂಪೇಟೆ ಮತ್ತು ಕುಶಾಲನಗರದಲ್ಲಿ ತಾಲೂಕು ಆಸ್ಪತ್ರೆ ಆಗಬೇಕಿದೆ. ವಿರಾಜಪೇಟೆ ಮತ್ತು ಸೋಮವಾರಪೇಟೆ  ತಾಲೂಕು ಆಸ್ಪತ್ರೆ ಇವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಈ ಸಂದರ್ಭ ಹೇಳಿದರು.  

      ಕೊಡಗು ಜಿಲ್ಲೆಯಲ್ಲಿ ವೈದ್ಯರು, ತಜ್ಞ ವೈದ್ಯರ ಸಂಖ್ಯೆ ಕಡಿಮೆ ಇದ್ದು, ಕೊಡಗು ಜಿಲ್ಲೆಯನ್ನು ವಿಶೇಷ ಜಿಲ್ಲೆ ಎಂದು ಪರಿಗಣಿಸಿ ವೈದ್ಯರ ನಿಯೋಜನೆಗೆ ಕ್ರಮವಹಿಸಲಾಗುವುದು ಎಂದು ದಿನೇಶ್ ಗುಂಡೂರಾವ್  ಹೇಳಿದರು.  

      ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯವಾಗಿ ನಿರ್ವಹಿಸಬೇಕು. ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಇ-ಕಚೇರಿ ಮೂಲಕ ಕಡತಗಳನ್ನು ಸಲ್ಲಿಸಬೇಕು ಸಚಿವರು ಹೇಳಿದರು.  

       ಮಡಿಕೇರಿ  ಶಾಸಕ ಡಾ.ಮಂತರ್ ಗೌಡ  ಮಾತನಾಡಿ ಜಿಲ್ಲೆಯಲ್ಲಿ ತಜ್ಞ ವೈದ್ಯರ ಕೊರತೆ ಇದ್ದು, ಆದಷ್ಟು ಶೀಘ್ರ ತಜ್ಞ ವೈದ್ಯರನ್ನು ನಿಯೋಜಿಸುವಂತಾಗಬೇಕು ಎಂದು ಸಚಿವರಲ್ಲಿ ಕೋರಿದರು.

       ಎಂಆರ್‍ಐ ಸ್ಕ್ಯಾನ್ ಅಳವಡಿಸುವುದು ಸೇರಿದಂತೆ ಅಗತ್ಯ ಮಾನವ ಸಂಪನ್ಮೂಲ ಹಾಗೂ ಉಪಕರಣಗಳನ್ನು ಒದಗಿಸುವಂತಾಗಬೇಕು ಎಂದು ಶಾಸಕರು ಮನವಿ ಮಾಡಿದರು. 

     ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಾದ ರಂದೀಪ್ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರಾದ ನವೀನ್ ಭಟ್  ಹಲವು ವಿಚಾರಗಳ ಕುರಿತು ಪ್ರಸ್ತಾಪಿಸಿದರು.  

        ಜಿಲ್ಲಾಧಿಕಾರಿ ವೆಂಕಟ್ ರಾಜಾ ಮತ್ತು ಜಿ.ಪಂ.ಸಿಇಒ ವರ್ಣಿತ್ ನೇಗಿ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯಕ್ರಮ ಅನುಷ್ಠಾನ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net