

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಬೆಂಡೆಕೆರೆ ಸಮೀಪದ ಮೂಡಲಗಿರಿ ತಿಮ್ಮಪ್ಪ ದೇವಾಲಯದ ಹುಂಡಿಯಲ್ಲಿದ್ದ ಹಣವನ್ನು ಮಂಗಳವಾರ ರಾತ್ರಿ ಕಳವು ಮಾಡಲಾಗಿದೆ.
ದೇವಾಲಯದ ಆವರಣದಲ್ಲೇ ಇದ್ದ ಅಡುಗೆ ಮನೆಯ ಬೀಗ ಒಡೆದು ಅಲ್ಲಿದ್ದ ಗ್ಯಾಸ್ ಸಿಲಿಂಡರ್ ಬಳಸಿಕೊಂಡು ಗ್ಯಾಸ್ ಕಟರ್ ಮೂಲಕ ಮುಖ್ಯದ್ವಾರದಿಂದ ಒಳ ಪ್ರವೇಶ ಮಾಡಿದ್ದಾರೆ. ಇದಕ್ಕೂ ಮುನ್ನ ದೇವಾಲಯದ ಆವರಣದಲ್ಲಿದ್ದ ಸಿಸಿ ಕ್ಯಾಮರಾವನ್ನು ಮೇಲ್ಮುಖವಾಗಿ ತಿರುಗಿಸಿ ಕೃತ್ಯ ಸೆರೆಯಾಗದಂತೆ ಮಾಡಿದ್ದಾರೆ. ಬಾಣಾವರ ಠಾಣೆ ಪಿಎಸ್‌ಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ದೇವಸ್ಥಾನದ ಅಭಿವೃದ್ಧಿ ಸಮಿತಿ ಪ್ರಕರಣ ದಾಖಲು ಮಾಡಿದೆ.
ಈ ಕುರಿತು ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಾಗಭೂಷಣ್ ಮಾತನಾಡಿ, ಎಂದಿನಂತೆ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬೀಗ ಒಡೆದಿರುವುದು ಕಂಡು ಬಂತು. ಕೂಡಲೇ ವಿಷಯವನ್ನು ಪೊಲೀಸರಿಗೆ ಮುಟ್ಟಿಸಲಾಯಿತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಂಡಿಯಲ್ಲಿ ಸುಮಾರು 40-50 ಸಾವಿರ ರೂ. ಹಣ ಇತ್ತು ಎಂದು ತಿಳಿಸಿದ್ದಾರೆ.