

ಮಂಗಳೂರು: ಕಾವೂರು ದೇವಸ್ಥಾನದ ಆವರಣದ ಪಾರ್ಕಿಂಗ್ ಸ್ಥಳದಲ್ಲಿದ್ದ ಸ್ಕೂಟರ್ ಸೀಟ್ ಒಳಗೆ ಇಟ್ಟಿದ್ದ ನಗದನ್ನು ಕಳ್ಳನೊಬ್ಬ ಕಳವು ಮಾಡುತ್ತಿರುವ ದೃಶ್ಯ ಸಿ.ಸಿ. ಕ್ಯಾಮರಾದಲ್ಲಿ ದಾಖಲಾಗಿದೆ.
ಆರೋಪಿ ಕೆಲವು ಸ್ಕೂಟರ್‌ಗಳ ಬಳಿ ಅಡ್ಡಾಡಿ ಕೊನೆಗೆ ಒಂದು ಸ್ಕೂಟರ್‌ನಿಂದ ನಗದು ಕಳವು ಮಾಡಿ ಹೋಗುವ ದೃಶ್ಯ ಸಿ.ಸಿ. ಕ್ಯಾಮರಾದಲ್ಲಿ ದಾಖಲಾಗಿದೆ. ಸ್ಕೂಟರ್ ಶಾಂತಿನಗರದ ನಿವಾಸಿಯೊಬ್ಬರದ್ದಾಗಿದ್ದು, ಅದರಲ್ಲಿ ಸುಮಾರು 10 ಸಾವಿರ ರೂ. ನಗದು ಇತ್ತು ಎಂದು ತಿಳಿದು ಬಂದಿದೆ. ಯಾವುದೋ ವಸ್ತುವಿನಿಂದ ಸ್ಕೂಟರ್ ಸೀಟ್‌ನ ಲಾಕ್ ಮುರಿದು ಹಣ ಕಳವು ಮಾಡಿದ್ದಾನೆ.
ಈ ಬಗ್ಗೆ ಕಾವೂರು ಠಾಣೆಯಲ್ಲಿ ವಿಚಾರಿಸಿದಾಗ, ಹಣ ಕಳವು ಆಗಿರುವ ಬಗ್ಗೆ ದೂರು ದಾಖಲಾಗಿಲ್ಲ. ವಿಡಿಯೋ ದೃಶ್ಯಾವಳಿ ಆಧಾರಲ್ಲಿ ಆರೋಪಿ ಪತ್ತೆಗೆ ಪ್ರಯತ್ನ ನಡೆಯುತ್ತಿದೆ. ವಿವಿಧ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನೂ ಪರಿಶೀಲಿಸಲಾಗುತ್ತಿದೆ. ಆತ ಬೇರೆ ಕಡೆಯಲ್ಲೂ ಇದೇ ರೀತಿಯ ಕೃತ್ಯ ಎಸಗಿದ್ದಾನಾ, ಆತನ ಜತೆ ಬೇರೆ ಯಾರಾದರೂ ಇದ್ದಾರಾ ಎಂದು ತಿಳಿಯುವ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಡಿಸೆಂಬರ್‌ನಲ್ಲೂ ಇದೇ ರೀತಿಯ ಕೃತ್ಯ ದೇವಳದ ವಠಾರದಲ್ಲಿ ನಡೆದಿತ್ತು. ಆ ಪ್ರಕರಣದಲ್ಲೂ ಆರೋಪಿ ಪತ್ತೆಯಾಗಿಲ್ಲ. ಎರಡೂ ಪ್ರಕರಣದಲ್ಲೂ ಓರ್ವನೇ ಆರೋಪಿಯಾಗಿರುವ ಸಾಧ್ಯತೆಯಿದ್ದು, ಶೀಘ್ರ ಆತನನ್ನು ಪತ್ತೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.