

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರು ಕಳೆದುಕೊಂಡಿದ್ದ ಮೊಬೈಲ್ ಮತ್ತು ಪರ್ಸನ್ನು ದೇವಳದ ನೌಕರರೊಬ್ಬರು ವಾರಸುದಾರರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಸೋಮವಾರ ರಜಾದಿನವಾದ ಕಾರಣ ಭಕ್ತರ ಸಂಖ್ಯೆ ಅಧಿಕವಿತ್ತು. ನೌಕರ ಉಮೇಶ್ ಅವರಿಗೆ ಭಕ್ತರೊಬ್ಬರು ಕಳೆದುಕೊಂಡಿದ್ದ ಹಣ ದೊರಕಿತ್ತು. ತಕ್ಷಣ ಮಾಹಿತಿ ಕೇಂದ್ರಕ್ಕೆ ತಿಳಿಸಿ ಧ್ವನಿವರ್ಧಕದ ಮೂಲಕ ಮಾಹಿತಿ ನೀಡಲಾಗಿತ್ತು. ಬಳಿಕ ಹಣ ಕಳೆದುಕೊಂಡವರು ಬಂದು ಹಣ ಪಡೆದಿದ್ದರು.
ಉಮೇಶ್ ಅವರಿಗೆ ಮಂಗಳವಾರ ಭಕ್ತರೊಬ್ಬರ ಮೊಬೈಲ್ ದೊರಕಿದ್ದು ಅದನ್ನು ಕೂಡ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ನೌಕರನ ಪ್ರಾಮಾಣಿಕತೆಯನ್ನು ಆಡಳಿತಾಧಿಕಾರಿ ಜುಬಿನ್ ಮೊಹಾಪಾತ್ರ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಮತ್ತು ಭಕ್ತರು ಶ್ಲಾಘಿಸಿದ್ದಾರೆ.