

ಚಿಕ್ಕಬಳ್ಳಾಪುರ/ಚಿಂತಾಮಣಿ: ಚಿಂತಾಮಣಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ 68.65 ಲಕ್ಷ ರೂಪಾಯಿ ವಿದ್ಯಾರ್ಥಿ ವೇತನದ ದುರುಪಯೋಗದ ಪ್ರಕರಣ ಬೆಳಕಿಗೆ ಬಂದಿದೆ.
2021 ಏಪ್ರಿಲ್‌ನಿಂದ ಕರ್ತವ್ಯಕ್ಕೆ ಗೈರಾಗಿರುವ ಕಾಲೇಜಿನ ದ್ವಿತೀಯ ದರ್ಜೆ ಸಹಾಯಕ ಎನ್.ಸಂತೋಷ್ ಕುಮಾರ್ ಚೆಕ್ ಪುಸ್ತಕಗಳನ್ನು ಸುಪರ್ದಿಯಲ್ಲಿಟ್ಟುಕೊಂಡು, ಸಹಿ ನಕಲು ಮಾಡಿ ಹಣವನ್ನು ವೈಯಕ್ತಿಕ ಖಾತೆಗೆ ವರ್ಗಾಯಿಸಿಕೊಂಡಿರುವುದರ ಬಗ್ಗೆ ಶುಕ್ರವಾರ ಕಾಲೇಜಿನ ಪ್ರಾಂಶುಪಾಲೆ ಶಾರದಾ ಅವರು ನಗರ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ:ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ವಿದ್ಯಾರ್ಥಿ ವೇತನ ಸಿಕ್ಕಿಲ್ಲ. ಈ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ದಾಖಲೆಗಳನ್ನು ಪರಿಶೀಲಿಸಿದಾಗ ಕಾಲೇಜಿನ ಬ್ಯಾಂಕ್ ಖಾತೆಯಿಂದ ಸಂತೋಷ್ ಖಾತೆಗೆ ಹಣ ವರ್ಗಾಯಿಸಿಕೊಂಡಿರುವುದು ಗೊತ್ತಾಗಿದೆ.
2012ನೇ ಸಾಲಿನಿಂದ ದ್ವಿತೀಯ ದರ್ಜೆ ಸಹಾಯಕರಾಗಿರುವ ಸಂತೋಷ್ ಕುಮಾರ್‌ಗೆ 2019ನೇ ಸಾಲಿನ ನ.23ರಿಂದ ವಿದ್ಯಾರ್ಥಿವೇತನ ವಿಭಾಗ ನಿರ್ವಹಣೆಯ ಜವಾಬ್ದಾರಿ ವಹಿಸಲಾಗಿತ್ತು. ಆದರೆ, ಕಳೆದ ಏಪ್ರಿಲ್‌ನಿಂದ ಕಾಲೇಜಿಗೆ ಗೈರಾಗಿದ್ದು, ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ಚೆಕ್ ಬುಕ್ ಮತ್ತು ವಿದ್ಯಾರ್ಥಿ ವೇತನದ ಕಡತಗಳನ್ನು ಮುಖ್ಯಸ್ಥರಿಗೆ ಹಸ್ತಾಂತರಿಸಿರಲಿಲ್ಲ. ಬೆಂಗಳೂರಿನ ಥಣಿಸಂದ್ರ ಕೆನರಾ ಬ್ಯಾಂಕ್ ಶಾಖೆಯಲ್ಲಿ ವಿದ್ಯಾರ್ಥಿ ವೇತನದ ಹಣದ ಪೈಕಿ 68.65 ಲಕ್ಷ ರೂಪಾಯಿ ಸಂತೋಷ್ ಕುಮಾರ್ ಖಾತೆಗೆ ವರ್ಗಾವಣೆಯಾಗಿದೆ. ಈ ಬಗ್ಗೆ ಕಾಲೇಜು 2021 ಡಿಸೆಂಬರ್‌ನಲ್ಲಿ ಪ್ರಾಂಶುಪಾಲೆ ಶಾರದಾ ಶಿಕ್ಷಣ ಇಲಾಖೆಗೆ ಲಿಖಿತ ದೂರು ಸಹ ಸಲ್ಲಿಸಿದ್ದರು. ಈ ದೂರಿನ ಹಿನ್ನೆಲೆಯಲ್ಲಿ 2021 ಡಿಸೆಂಬರ್ 14ರಂದು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಅಪ್ಪಾಜಿಗೌಡ, ವಿಶೇಷ ಅಧಿಕಾರಿ ಗೌರಿನಾಯ್ಡು ಅವರ ನೇತೃತ್ವದ ತಂಡ ಅವ್ಯವಹಾರದ ಬಗ್ಗೆ ತನಿಖೆ ನಡೆಸಿ ಪೊಲೀಸರಿಗೆ ದೂರು ನೀಡಿ ಪ್ರಕರಣ ದಾಖಲು ಮಾಡಲು ಸೂಚಿಸಿದ್ದರು ಎನ್ನಲಾಗಿದೆ.
ಚೆಕ್‌ಗೆ ಪ್ರಾಂಶುಪಾಲರ ನಕಲಿ ಸಹಿ ಹಾಕಲಾಗಿದೆ. ಲಕ್ಷಾಂತರ ರೂ. ಹಣವನ್ನು ಒಂದು ಖಾತೆಯಿಂದ ಮತ್ತೊಂದು ಖಾತೆಗೆ ವರ್ಗಾಯಿಸುವ ಸಂದರ್ಭದಲ್ಲಿ ಬ್ಯಾಂಕಿನ ಸಿಬ್ಬಂದಿಯೂ ಸಂಬಂಧಪಟ್ಟವರಿಂದ ದೃಢೀಕರಿಸಿಕೊಂಡಿಲ್ಲ ಎಂದು ಪ್ರಾಂಶುಪಾಲೆ ದೂರಿನಲ್ಲಿ ಆರೋಪಿಸಿದ್ದು, ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.
ತರಾಟೆಗೆ ತೆಗೆದುಕೊಂಡಿದ್ದ ಶಾಸಕ: ಇತ್ತೀಚೆಗೆ ಕೈಗೊಂಡಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಡಳಿತ ಸಮಿತಿ ಸಭೆಯಲ್ಲಿ ಸರ್ಕಾರದಿಂದ ಬಿಡುಗಡೆಯಾಗಿದ್ದ ಅನುದಾನದಲ್ಲಿ ವಿದ್ಯಾರ್ಥಿ ವೇತನ ಹಂಚಿಕೆಗೆ ನಿರ್ಲಕ್ಷ್ಯ, ದುರುಪಯೋಗದ ಮಾಹಿತಿ ಇದ್ದರೂ ಠಾಣೆಗೆ ದೂರು ನೀಡಿಲ್ಲವೇಕೆ?. ಹಿರಿಯ ಅಧಿಕಾರಿಗಳ ಗಮನಕ್ಕೆ ತರದಿರುವುದರ ಬಗ್ಗೆ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಎಂ.ಕೃಷ್ಣಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿ, ಪ್ರಾಂಶುಪಾಲರು ಮತ್ತು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.
ಕಾಲೇಜಿಗೆ ಬಿಡುಗಡೆಯಾದ ಅನುದಾನಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಪರಿಶೀಲಿಸಿದಾಗ ನಕಲಿ ಸಹಿ, ವೈಯಕ್ತಿಕ ಖಾತೆಗೆ ಹಣ ಜಮಾ ಆಗಿರುವುದು ತಿಳಿದು ಬಂತು. ಇದಕ್ಕೆ ಇಲಾಖೆಯ ಅನುಮತಿ ಪಡೆದುಕೊಂಡು ವಂಚನೆ ಪ್ರಕರಣದ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಶಾರದಾ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ, ಚಿಂತಾಮಣಿ ಅವ್ಯವಹಾರ ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಇತರ ಕಾಲೇಜುಗಳಲ್ಲಿನ ಅನುದಾನ ಬಳಕೆ ಬಗ್ಗೆ ಸಂಬಂಧಪಟ್ಟ ಇಲಾಖೆ ಪರಿಶೀಲಿಸಿ, ಪಾರದರ್ಶಕತೆ ದೃಢಪಡಿಸಿಕೊಳ್ಳಬೇಕು. ಮಂಜುನಾಥ್, ವಿದ್ಯಾರ್ಥಿ ಪರ ಸಂಘಟನೆ ಮುಖಂಡ, ಚಿಂತಾಮಣಿ