

ಗೌರಿಬಿದನೂರು: ಲೋಕಾಯುಕ್ತ ಎಂದು ಹೇಳಿಕೊಂಡು 10 ತಿಂಗಳ ಹಿಂದೆ ಇಲ್ಲಿನ ಪೌರಾಯುಕ್ತರಿಗೆ ಕರೆ ಮಾಡಿ, ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಾರಾಜ್ಯ ಸೈಬರ್ ಚೋರನನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ನೆರೆಯ ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಚೆರವುಮುನೆಪ್ಪಗಾರಿಪಲ್ಲಿಯ ಚನ್ನಕೇಶವ ರೆಡ್ಡಿ(21) ಬಂಧಿತ ಆರೋಪಿ.
ಏನಿದು ಪ್ರಕರಣ?
2024ರ ಮೇ 4ರಂದು ಇಲ್ಲಿನ ಪೌರಾಯುಕ್ತರಿಗೆ ಆರೋಪಿ ಚನ್ನಕೇಶವ ರೆಡ್ಡಿ, ವಾಟ್ಸ್‌ಆ್ಯಪ್ ಕರೆ ಮಾಡಿ, ನಾನು ಬೆಂಗಳೂರಿನ ಲೋಕಾಯುಕ್ತ ಕಚೇರಿಯಿಂದ ಮಾತನಾಡುತ್ತಿರುವೆ. ನಿಮ್ಮ ಮೇಲೆ ಭ್ರಷ್ಟಾಚಾರದ ಆಪಾದನೆ ಬಂದಿದೆ. ಪ್ರಕರಣವನ್ನು ಮುಂದೆ ಸಾಗದಂತೆ ನೋಡಿಕೊಳ್ಳಲು ಹಣ ನೀಡಬೇಕು, ಇಲ್ಲವಾದಲ್ಲಿ ಕಚೇರಿ ಮೇಲೆ ದಾಳಿ ನಡೆಸಲಾಗುವುದು ಎಂದು ಬೆದರಿಕೆ ಹಾಕಿದ್ದ. ಈ ಕುರಿತು ಸ್ಥಳೀಯ ನಗರಠಾಣೆಯಲ್ಲಿ ಮುಖ್ಯಾಧಿಕಾರಿ ದೂರು ದಾಖಲಿಸಿದ್ದರು.
ಪ್ರಕರಣ ಭೇದಿಸಲು ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಆದರೆ ಆರೋಪಿ ಮೊಬೈಲ್ ಸಂಖ್ಯೆ ಬಿಟ್ಟರೆ ಬೇರೆ ಸಾಕ್ಷ್ಯಗಳು ಇರಲಿಲ್ಲ. ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ತಲೆಮರೆಸಿಕೊಂಡು ಓಡಾಡುತ್ತಿದ್ದ. ಆದರೆ ತನಿಖಾ ತಂಡನಿರಂತರ ಶ್ರಮ ವಹಿಸಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ಮತ್ತೊಬ್ಬ ಆರೋಪಿ ಬಂಧನಕ್ಕೆ ಬಲೆ
ಆರೋಪಿ ಚನ್ನಕೇಶವ ರೆಡ್ಡಿ ಸ್ನೇಹಿತರ ಜತೆಗೂಡಿ ಆನ್‌ಲೈನ್‌ನಲ್ಲಿ ಅಧಿಕಾರಿಗಳಿಗೆ ಬೆದರಿಕೆ ಹಾಕಿ ವಂಚಿಸುವ ಜಾಲ ಸೃಷ್ಟಿಸಿಕೊಂಡಿದ್ದ ಎಂಬ ಖಚಿತ ಮಾಹಿತಿ ಪಡೆದ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸ್ನೇಹಿತ ನಲ್ಲಗುಟ್ಲಪಲ್ಲಿಯ ಧನುಷ್ ರೆಡ್ಡಿ ಸೇರಿ ಈ ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದಾನೆ. ತಲೆ ಮರೆಸಿಕೊಂಡಿರುವ ಧನುಷ್‌ರೆಡ್ಡಿಗೆ ಪೊಲೀಸರು ಬಲೆ ಬೀಸಿದ್ದಾರೆ.
ತಂಡದ ಶ್ರಮಕ್ಕೆ ಡಿಜಿಪಿ ಮೆಚ್ಚುಗೆ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಅಪರ ಪೊಲೀಸ್ ಅಧೀಕ್ಷಕ ರಾಜಾ ಇಮಾಂ ಖಾಸಿಂ, ಡಿವೈಎಸ್‌ಪಿ ಶಿವಕುಮಾರ್, ವೃತ್ತ ನಿರೀಕ್ಷಕ ಸತ್ಯನಾರಾಯಣ್ ಮಾರ್ಗದರ್ಶನದಲ್ಲಿ ನಗರಠಾಣೆ ಎಸ್‌ಐ ಗೋಪಾಲ್, ಸಿಬ್ಬಂದಿ ಗೋವಿಂದ, ಶಿವಶೇಖರ್, ಮಹಾಂತೇಶ, ಸಂತೋಷ್ ಮಾಳಗಿ, ತಾಂತ್ರಿಕ ಸಿಬ್ಬಂದಿ ರವಿಕುಮಾರ್ ಹಾಗೂ ಮುನಿಕೃಷ್ಣ ಅವರನ್ನು ಒಳಗೊಂಡ ತಂಡ ಪ್ರಕರಣ ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಕೇಂದ್ರ ವಲಯ ಡಿಜಿಪಿ ಲಾಬುರಾಮ್ ತಂಡದ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.