

ಉಡುಪಿ: ವಿಧಾನಸಭಾ ಚುನಾವಣೆಗೆ ಟಿಕೆಟ್ ಕೊಡಿಸುವುದಾಗಿ ಹೇಳಿ ಉದ್ಯಮಿಯೋರ್ವನಿಂದ ಏಳು ಕೋಟಿ ರೂಪಾಯಿ ಪಡೆದು ವಂಚಿಸಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ್ತಿ ಚೈತ್ರಾ ಕುಂದಾಪುರ ಎಂಬಾಕೆಯನ್ನು ಸಿಸಿಬಿ ಪೊಲೀಸರು ಮಂಗಳವಾರ ತಡರಾತ್ರಿ ಉಡುಪಿಯಲ್ಲಿ ಬಂಧಿಸಿದ್ದಾರೆ.
ನನ್ನಿಂದ ಏಳು ಕೋಟಿ ರೂಪಾಯಿ ಪಡೆದು ವಂಚಿಸಿದ್ದಾರೆ ಎಂದು ಬೈಂದೂರು ಮೂಲದ ಉದ್ಯಮಿ ಗೋವಿಂದಬಾಬು ಪೂಜಾರಿ ಎಂಬುವರು ಪೊಲೀಸರಿಗೆ ದೂರು ನೀಡಿದ್ದರಿಂದ ಚೈತ್ರಾ ಕುಂದಾಪುರ ವಿರುದ್ಧ ಬೆಂಗಳೂರಿನಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿ ಶ್ರೀಕಾಂತ ನಾಯಕ್ ಪೆಲತ್ತೂರು, ರಮೇಶ್ ಹಾಗೂ ಪ್ರಸಾದ ಬೈಂದೂರು ಎಂಬುವರನ್ನೂ ಪೊಲೀಸರು ಬಂಧಿಸಿದ್ದಾರೆ.
ಆತ್ಮಹತ್ಯೆಗೆ ಯತ್ನ?:
ಉಡುಪಿಯ ಶ್ರೀಕೃಷ್ಣ ಮಠದ ಸಮೀಪದ ವಾಹನ ಪಾರ್ಕಿಂಗ್ ಪ್ರದೇಶದಲ್ಲಿ ಬಂಧಿಸಿ, ಪೊಲೀಸ್ ವಾಹನದಲ್ಲಿ ಕರೆದೊಯ್ಯುತ್ತಿರುವಾಗ ಚೈತ್ರಾ ಆತ್ಮಹತ್ಯೆಗೆ ಯತ್ನಿಸಿದರು ಎಂದು ತಿಳಿದು ಬಂದಿದೆ. ತನ್ನ ಕೈಬೆರಳಿನಲ್ಲಿದ್ದ ಉಂಗುರ ನುಂಗಲು ಯತ್ನಿಸಿದ್ದು, ಜತೆಯಲಿದ್ದ ಪೊಲೀಸರು ತಕ್ಷಣ ತಡೆದರು ಎನ್ನಲಾಗಿದೆ. ಈ ವೇಳೆ ಚೈತ್ರಾ, ಪೊಲೀಸ್ ವಾಹನದ ಗಾಜು ಒಡೆದು, ಕೂಗಾಡಿ ಹೈಡ್ರಾಮಾ ಮಾಡಿದರು ಎಂದೂ ತಿಳಿದು ಬಂದಿದೆ.