ಜೀವನದಲ್ಲಿ ಹಣ ಮಾತ್ರ ಮುಖ್ಯ

25bhr 1 (1)
ಬಾಳೆಹೊನ್ನೂರು ಸಮೀಪದ ಮೆಣಸುಕೊಡಿಗೆ ಭಗತ್‌ಸಿಂಗ್ ಕ್ರೀಡಾಂಗಣವನ್ನು ಕ್ಲಿಫರ್ಡ್ ಲಾರೆನ್ಸ್ ಅಭಿಮಾನಿ ಬಳಗದ ಸದಸ್ಯರು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು. ಸಂದೇಶ್, ಸಿದ್ದಿಕ್, ಕೃಷ್ಣಪ್ಪ ಇದ್ದರು.
Published on

ಬಾಳೆಹೊನ್ನೂರು: ಮನುಷ್ಯನಿಗೆ ಜೀವನದಲ್ಲಿ ಹಣವಿದ್ದರೆ ಮಾತ್ರ ಸಾಲದು. ಅದನ್ನು ಕೇವಲ ಸ್ವಂತಕ್ಕೆ ಬಳಸದೆ ಸಮಾಜ ಸೇವೆಗೆ ವಿನಿಯೋಗಿಸುವ ಮನಸ್ಸು ಮುಖ್ಯ ಎಂದು ರಾಯಲ್ ಇಂಡಿಯನ್ಸ್ ಕ್ರಿಕೆಟ್ ತಂಡದ ವ್ಯವಸ್ಥಾಪಕ ಓ.ಡಿ.ಸ್ಟೀಫನ್ ಹೇಳಿದರು.
ಕುವೈತ್ ಉದ್ಯಮಿ, ಸಮಾಜ ಸೇವಕ ಕ್ಲಿಫರ್ಡ್ ಲಾರೆನ್ಸ್ ಸಿಕ್ವೇರಾ ಅವರ 50ನೇ ಜನ್ಮ ದಿನಾಚರಣೆ ಅಂಗವಾಗಿ ಮೆಣಸುಕೊಡಿಗೆಯ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಸೋಮವಾರ ಸ್ವಚ್ಛತಾ ಕಾರ್ಯ ನೆರವೇರಿಸಿ ಮಾತನಾಡಿ, ಕುವೈತ್‌ನಲ್ಲಿ ಉದ್ಯೋಗದಲ್ಲಿರುವ ಕ್ಲಿಫರ್ಡ್ ಲಾರೆನ್ಸ್ ತಮ್ಮ ಸ್ವ ಗ್ರಾಮದ ಕುರಿತು ಅಪಾರ ಕಾಳಜಿ ಹೊಂದಿದ್ದು, ಕೆಲ ವರ್ಷಗಳಿಂದ ಸಕ್ರಿಯವಾಗಿ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಕರೊನಾ ವೇಳೆ ನೂರಾರು ಬಡ ಕುಟುಂಬಗಳಿಗೆ ದಿನಸಿ ಕಿಟ್, ಆರೋಗ್ಯ ಕಿಟ್‌ಗಳನ್ನು ವಿತರಿಸಿದ್ದಾರೆ. ಅನಾಥಾಶ್ರಮಗಳಿಗೆ ನೆರವು ನೀಡಿದ್ದಾರೆ. ನೆರೆ ಸಂದರ್ಭದಲ್ಲಿ ಸಂತ್ರಸ್ತರಿಗೆ ನೆರವು ನೀಡಿದ್ದಾರೆ.
ಬಿ.ಕಣಬೂರು ಗ್ರಾಪಂ ವ್ಯಾಪ್ತಿಯ ವಾರ್ಡ್‌ನಲ್ಲಿ ಸ್ವಚ್ಛತಾ ಆಂದೋಲನ ನಡೆಸಿ ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಿದ್ದಾರೆ. ಕ್ರೀಡೆ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಅವರು ಕ್ರೀಡೆಗಳಿಗೆ ಸದಾ ಪ್ರೋತ್ಸಾಹಿಸುತ್ತಿದ್ದಾರೆ. ಕ್ಲಿಫರ್ಡ್ ತಮ್ಮ ದುಡಿಮೆಯ ಒಂದು ಭಾಗವನ್ನು ಸಮಾಜಕ್ಕಾಗಿ ನೀಡುತ್ತಿರುವುದು ಶ್ಲಾಘನೀಯ ಎಂದರು.
ಕ್ಲಿಫರ್ಡ್ ಅಭಿಮಾನಿ ಬಳಗದ ಮೇಲ್ವಿಚಾರಕ ಜಗದೀಶ್ ಅರಳೀಕೊಪ್ಪ ಮಾತನಾಡಿ, ಕ್ಲಿಫರ್ಡ್ ಅವರ 50ನೇ ಜನ್ಮ ದಿನದ ಅಂಗವಾಗಿ ಅವರ ಆಶಯದಂತೆ ಮೆಣಸುಕೊಡಿಗೆ ಭಗತ್‌ಸಿಂಗ್ ಕ್ರೀಡಾಂಗಣ ಸ್ವಚ್ಛತೆ, ರೋಗಿಗಳಿಗೆ ನೆರವು, ಅಂಗನವಾಡಿ ಮಕ್ಕಳಿಗೆ ವಿವಿಧ ಪರಿಕರಗಳನ್ನು ನೀಡುವ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಆಟೋ ಚಾಲಕರ ಸಂಘದ ಅಧ್ಯಕ್ಷ ಸಂದೇಶ್, ಮಲೆಯಾಳಿ ಕಾಲೋನಿಯ ಗ್ರಾಮಸ್ಥ ಸಿದ್ದಿಕ್, ಕೃಷ್ಣಪ್ಪ, ಹರೀಶ್ ಪೂಜಾರಿ, ಕುಮಾರ್ ಕುಸಾಲ್, ಶ್ರೀಧರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net