

ಬಾಳೆಹೊನ್ನೂರು: ರೇಣುಕಾ ನಗರದ ವಿಘ್ನೇಶ್ವರ ಕಲಾ ಬಳಗ ಮುಂದಿನ ದಿನಗಳಲ್ಲಿ ಸಾಮಾಜಿಕ ಕಳಕಳಿಯುಳ್ಳ ನಾಟಕಗಳನ್ನು ಪ್ರದರ್ಶನ ಮಾಡಿ ಅದರಿಂದ ಬಂದ ಹಣವನ್ನು ದೇವಾಲಯಗಳ ಜೀರ್ಣೋದ್ಧಾರ, ಪೂಜಾ ಸಾಮಾಗ್ರಿಗಳನ್ನು ಬಳಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಲಾ ಬಳಗದ ನಿರ್ದೇಶಕ ಬಿ.ಜಗದೀಶ್ಚಂದ್ರ ಹೇಳಿದರು.
ರೇಣುಕನಗರದ ವಿಘ್ನೇಶ್ವರ ಕಲಾ ಬಳಗದದಿಂದ ಆರಂಭಿಸಿರುವ ಯೂಟ್ಯೂಬ್ ಚಾನೆಲ್ ಬಿಡುಗಡೆ ಮಾಡಿ ಮಾತನಾಡಿ,ರಂಗಭೂಮಿ ಕಲೆಯನ್ನು ಜನರು ತಿರಸ್ಕಾರ ಮಾಡುತ್ತಿರುವ ಈ ದಿನಗಳಲ್ಲಿ ವಿಘ್ನೇಶ್ವರ ಕಲಾ ಬಳಗ ವಿನೂತನ ಪ್ರಯೋಗಗಳೊಂದಿಗೆ ಸಾಮಾಜಿಕ ಕಳಕಳಿ, ಹಿಂದು ಸಮಾಜದ ಜಾಗೃತಿಗಾಗಿ ವಿಶೇಷ ನಾಟಕಗಳನ್ನು ಪ್ರದರ್ಶನ ಮಾಡಿ ಅದರಿಂದ ಬಂದ ಹಣವನ್ನು ದೇವಾಲಯಗಳಿಗೆ ವಿನಿಯೋಗಿಸಿ ದೇವಾಲಯಗಳ ಅಭಿವೃದ್ಧಿಗೆ ಕೈ ಜೋಡಿಸಲಾಗುವುದು ಎಂದು ತಿಳಿಸಿದರು.
ಈಗಾಗಲೇ ಕಲಾಬಳಗವು ಈ ಬಾರಿ ಜೈ ಶ್ರೀರಾಮ್ ಎಂಬ ನಾಟಕ ಎರಡು ಪ್ರದರ್ಶನವನ್ನು ಮಾಡಿದ್ದು, ಇದರಿಂದ ಬಂದ ಹಣವನ್ನು ಪ್ರತಿಭಾವಂತ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಹಲವಾರು ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುವುದರೊಂದಿಗೆ ರಂಗಭೂಮಿ ಕಲೆಯನ್ನು ಮುಂದೆ ತರುವ ಪ್ರಯತ್ನ ಮಾಡಲಾಗುವುದು ಎಂದರು.
ಹಿರಿಯ ಕಲಾವಿದ ಸಿ.ಎಸ್.ಮಹೇಶ್ಚಂದ್ರ ಮಾತನಾಡಿ, ಮುಂದುವರಿದ ಸ್ಪರ್ಧಾತ್ಮಕ ಯುಗದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಅತ್ಯವಶ್ಯಕವಾಗಿದೆ. ಈ ಹಿನ್ನಲೆಯಲ್ಲಿ ವಿಘ್ನೇಶ್ವರ ಕಲಾ ಬಳಗ ಈ ಬಾರಿ ನೂತನ ಯೂಟ್ಯೂಬ್ ಚಾನೆಲ್ ಮೂಲಕ ಸಾರ್ವಜನಿಕರು, ರಂಗ ಪ್ರೇಮಿಗಳ ಮನಮುಟ್ಟುವ ಪ್ರಯತ್ನ ಮಾಡುತ್ತಿದೆ ಎಂದರು.