

ಬೆಂಗಳೂರು:ಬಾಕಿ ಬಿಲ್‌ಗಳಿಗೆ ಹಣ ಬಿಡುಗಡೆ ಸೇರಿ ಇತರ ಸಮಸ್ಯೆಗಳನ್ನು ಆಲಿಸುವ ನಿಟ್ಟಿನಲ್ಲಿ ಗುರುವಾರ ವಿಕಾಸಸೌಧದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಜೊತೆ ಸಭೆ ನಡೆಸಿದರು.
ಇಲಾಖೆ ಪ್ರಧಾನ ಕಾರ್ಯದರ್ಶಿ ಆಮ್ಲನ್ ಆದಿತ್ಯ ಬಿಸ್ವಾಸ್, ಕಾರ್ಯದರ್ಶಿ ಸಿ. ಸತ್ಯನಾರಾಯಣ ಸೇರಿ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸತೀಶ್ ಜಾರಕಿಹೊಳಿ, ಗುತ್ತಿಗೆದಾರರರ ಜೊತೆ ಸತತ 3 ಗಂಟೆ ಕಾಲ ಸಭೆ ನಡೆಸಿ ಸಮಸ್ಯೆ ಆಲಿಸಿದರು.
ಇಲಾಖೆಯಲ್ಲಿ ಒಟ್ಟು 9 ಸಾವಿರ ಕೋಟಿ ರೂ.ಬಿಲ್‌ಗಳು ಬಾಕಿ ಇದೆ. ಹಂತ ಹಂತವಾಗಿ ಈ ಬಿಲ್‌ಗಳಿಗೆ ಹಣ ಬಿಡುಗಡೆ ಮಾಡಬೇಕು. ವಿಭಾಗ ಮಟ್ಟದಲ್ಲಿ 2025ರ ಮಾರ್ಚ್‌ವರೆಗೆ ಜ್ಯೇಷ್ಠತೆ ಕಾಪಾಡಿಕೊಂಡು ಬಂದಿಲ್ಲ. ಆದರೆ, ಜೂನ್ ಮತ್ತು ಜುಲೈನಲ್ಲಿ ಮಾತ್ರ ಜ್ಯೇಷ್ಠತೆ ಪಾಲಿಸುತ್ತಿದ್ದಾರೆ. 2017ರಿಂದ 201-20ರ ಅವಧಿಯಲ್ಲಿ ಕೈಗೊಂಡ ಕಾಮಗಾರಿಗಳಿಗೆ ವ್ಯಾಟ್, ಜಿಎಸ್‌ಟಿಯ ಶೇ.12 ವ್ಯತ್ಯಾಸದ ಶೇ.8 ಜಿಎಸ್‌ಟಿ ಹಣವನ್ನು ಕೊಡಬೇಕೆಂದು ಸಿಎಂ ಆದೇಶಿಸಿದ್ದರೂ ಬಿಡಗಡೆಯಾಗಿಲ್ಲ ಎಂದು ಸಂಘದ ಅಧ್ಯಕ್ಷ ಆರ್.ಮಂಜುನಾಥ್, ಸಚಿವರ ಗಮನಕ್ಕೆ ತಂದರು.
ಪ್ರತಿ 10 ವರ್ಷಕ್ಕೊಮ್ಮೆ ಗುತ್ತಿಗೆದಾರರ ಪರವಾನಗಿಯನ್ನು ನವೀಕರಿಸಲು ಹಿಂದಿನ ಸಭೆಯಲ್ಲಿ ತೀರ್ಮಾನಿಸಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ. ಟೆಂಡರ್ ನಿಯಮಗಳಲ್ಲಿ ವಿಧಿಸುತ್ತಿರುವ ಷರತ್ತು ಸಡಿಲಗೊಳಿಸಲು ಸರ್ಕಾರದ ಮಟ್ಟದಲ್ಲಿ ಹಲವು ಸಭೆ ನಡೆಸಿದರೂ ಪ್ರಯೋಜನವಾಗಿಲ್ಲ. ಲೈನ್ ಆಫ್ ಕ್ರೆಡಿಟ್ ನೀಡುವಲ್ಲಿ ವಿವಿಧ ಬ್ಯಾಂಕ್‌ಗಳು ಹಿಂದೇಟು ಹಾಕುತ್ತಿರುವುದರಿಂದ ಇದನ್ನು ರದ್ದುಪಡಿಸಬೇಕು. ಟೆಂಡರ್ ಪ್ರಕ್ರಿಯೆ ಮುಗಿದ ನಂತರ ಎಫ್ಎಸ್ಡಿ ಮೊತ್ತದ ಶೇ.5 ಬದಲಾಗಿ ಶೇ.3 ಮೊತ್ತವನ್ನು ಪಕ್ಕದ ರಾಜ್ಯಗಳು ವಿಮೆ ಅಥವಾ ಎಸ್‌ಬಿಐ ಬಾಂಡ್ ಪರಿಗಣಿಸುತ್ತಿವೆ. ಅದೇ ಮಾದರಿಯನ್ನು ಇಲ್ಲಿಯೂ ತರಬೇಕು ಎಂದು ಮಂಜುನಾಥ್ ಮನವಿ ಮಾಡಿದರು.
16 ಬೇಡಿಕೆಯ ಮನವಿಯನ್ನು ಸಚಿವರಿಗೆ ಸಲ್ಲಿಸಲಾಯಿತು. ಇದಕ್ಕೆ ಸ್ಪಂದಿಸಿದ ಸತೀಶ್ ಜಾರಕಿಹೊಳ್ಳಿ, ಕಾಲಮಿತಿಯಲ್ಲಿ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಕ್ರಮಕೈಗೊಳ್ಳಲಾಗುವುದು. ಇದಕ್ಕಾಗಿ ದಕ್ಷ ಅಧಿಕಾರಿಗಳನ್ನು ಸಹ ನೇಮಿಸಿಕೊಂಡಿದ್ದೇವೆ. ಬಾಕಿ ಬಿಲ್‌ಗಳಿಗೆ ಹಣ ಬಿಡಗಡೆಗೂ ಕ್ರಮ ತೆಗೆದುಕೊಳ್ಳುವುದಾಗಿ ಗುತ್ತಿಗೆದಾರರಿಗೆ ಆಶ್ವಾಸನೆ ನೀಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎಂ.ರವೀಂದ್ರ, ಬಿಬಿಎಂ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಿ. ಎಂ. ನಂದಕುಮಾರ್ ಸೇರಿ ರಾಜ್ಯದ ಎಲ್ಲ ಜಿಲ್ಲೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.