

ಉಡುಪಿ: ಬಿಜೆಪಿಯಲ್ಲಿ ದುಡ್ಡು ಕೊಟ್ಟರೇ ಟಿಕೆಟ್ ಸಿಗುವುದಿಲ್ಲ. ಪಕ್ಷ ನಿಷ್ಠೆ, ಪರಿಶ್ರಮ ಮತ್ತು ಸಾಮಾನ್ಯ ಜನರ ನಡುವೆ ಕೆಲಸ ಮಾಡುವವರನ್ನು ಹೈಕಮಾಂಡ್ ಆಯ್ಕೆ ಮಾಡುತ್ತದೆ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರ.ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಉಡುಪಿ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದುಡ್ಡು ಕೊಟ್ಟವರಿಗೆ ಟಿಕೆಟ್ ಸಿಗುವುದಾಗಿದ್ದರೇ ಬೈಂದೂರಿನಲ್ಲಿ ಗೋವಿಂದ ಬಾಬು ಪೂಜಾರಿಯವರಿಗೆ ನೀಡಬೇಕಿತ್ತು. ಆದರೆ ಪಕ್ಷ ಕೊಟ್ಟದ್ದು ಗುರುರಾಜ್ ಗಂಟಿಹೊಳೆಯವರಿಗೆ, ಸುಳ್ಯದಲ್ಲಿ ಭಾಗೀರಥಿ ಮರುಳ್ಯಾ ಅವರಿಗೆ ನೀಡಿದ್ದೇವೆ. ಅವರ ಖಾತೆಯಲ್ಲಿ ಕೆಲವು ಸಾವಿರ ರೂ. ಇರಲಿಲ್ಲ. ದುಡ್ಡಿನ ಮೇಲೆ ನಮ್ಮ ಪಾರ್ಟಿಯಲ್ಲಿ ಟಿಕೆಟ್ ಸಿಗಲ್ಲ. ಹಾಗೆ ಭಾವಿಸುವುದು ತಪ್ಪು, ಹಣ ನೀಡಿ ಟಿಕೆಟ್ ಪಡೆಯಲು ಪ್ರಯತ್ನಿಸುವವರು ಮೋಸ ಹೋಗುತ್ತಾರೆ. ಟಿಕೆಟ್ ಮಾರಾಟದ ಸರಕಲ್ಲ ಎಂದರು.
ಕಾಂಗ್ರೆಸ್ ಮತ್ತು ಸಹಯೋಗಿ ಪಕ್ಷ ಐ.ಎನ್.ಡಿ.ಐ.ಎ ಮಿತ್ರಕೂಟ, ಅಜೆಂಡಾ ಕೇವಲ ಸನಾತನ ಧರ್ಮವನ್ನು ನಿಂದಿಸುವುದಾಗಿದೆ. ಭಾರತದ ಸಂಸ್ಕತಿಯನ್ನು ಅಪಮಾನಗೊಳಸುವುದು ಮತ್ತು ಭಾರತ ಅನ್ನುವಂತಹ ಪ್ರೇರಣೆ ಕೊಡುವ ಪದದ ಹಿಂದೆಯೇ ಅವರಿಗೆ ಒಂದು ರೀತಿಯ ಅಲರ್ಜಿ ಇರುವುದು ವ್ಯಕ್ತವಾಗುತ್ತಿದೆ. ಹಾಗಾಗಿ ನೀತಿ, ನೇತೃತ್ವ, ನಿಯತ್ತು ಮೂರು ಇಲ್ಲದೇ ಇರುವ ಐ.ಎನ್.ಡಿ.ಐ.ಎ ಅಲೆಯನ್ಸ್ ವಿರುದ್ದ ಬಿಜೆಪಿ ಗೆಲ್ಲುತ್ತದೆ. ಪದವಿಧರ ಶಿಕ್ಷಕರ ಕ್ಷೇತ್ರದ ಚುನಾವಣೆ ಸಂಬಂಧಪಟ್ಟಂತೆ ನೊಂದಣಿ ಪ್ರಕ್ರಿಯೆಗೆ ಈಗಾಗಲೇ ನೈಋತ್ಯ ಪದವೀಧರ ಕ್ಷೇತ್ರದ ಆರು ಜಿಲ್ಲೆಗಳಲ್ಲಿ ದಾವಣಗೆರೆಯ 2 ವಿಧಾನಸಭಾ ಕ್ಷೇತ್ರ, ಶಿವಮೊಗ್ಗ 7, ಉಡುಪಿ - ಚಿಕ್ಕಮಗಳೂರು ತಲಾ 5, ದ.ಕ 8, ಕೊಡಗು 2 ವಿಧಾನಸಭಾ ಕ್ಷೇತ್ರಗಳಿಗೆ ತಂಡ ರಚಿಸಲಾಗಿದೆ. ಅಕ್ಟೋಬರ್ ಮೊದಲನೆ ವಾರದ ಒಳಗೆ ನೊಂದಣಿ ಪ್ರಕ್ರಿಯೆಗೆ ಚುನಾವಣಾ ಆಯೋಗ ಅವಕಾಶ ಮಾಡಿಕೊಡುತ್ತದೆ ಎಂಬ ಮಾಹಿತಿ ಹಿನ್ನಲೆಯಲ್ಲಿ ಪ್ರಕ್ರಿಯೆಗಳನ್ನ ಮಾಡುತ್ತಿದ್ದೇವೆ. ಎರಡು ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ನಮಗಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ವಿಧಾನಸಭಾ ಚುನಾವಣೆಯನ್ನು ಗೆದ್ದರೂ ಈಗ ಜನಪ್ರಿಯತೆ ಕುಸಿದಿದೆ. ಬರಗಾಲ ತಾಂಡವವಾಡುತ್ತಿದೆ, ಜನರಿಗೆ ಸ್ಪಂದನೆ ಇಲ್ಲ. ಆಡಳಿತಕ್ಕೆ ಬಂದ ಮೂರೇ ತಿಂಗಳಿಗೆ ಅಂಗನವಾಡಿ ಶಿಕ್ಷಕರ ಚಳುವಳಿ, ಅಟೋ ಚಾಲಕ, ರೈತರ ಚಳುವಳಿ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದ ಒಳಗೂ ಎಲ್ಲವೂ ಸರಿ ಇಲ್ಲ ಎಂಬ ಸಂದೇಶವನ್ನು ಬಿ.ಕೆ ಹರಿಪ್ರಸಾದ್ ಹೇಳಿಕೆ ರವಾನಿಸಿವೆ ಎಂದರು.
ಲೋಕಸಭಾ ಚುನಾವಣೆಗೂ ಈಗಾಗಲೇ ಚುನಾವಣಾ ಸಿದ್ದತೆ ಮಾಡುತ್ತಿದ್ದೇವೆ. ಯಡಿಯೂರಪ್ಪನವರ ನೇತೃತ್ವದಲ್ಲಿ ಕಾವೇರಿ ಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಮುಳುಬಾಗಿಲು, ಕೂಡುಮಲೆ ಗಣಪತಿ ದೇವಸ್ಥಾನದಿಂದ ಪೂಜೆ ಮಾಡಿಸಿ ಯಾತ್ರೆ ಆರಂಭಿಸುತ್ತೇವೆ ಎಂದರು.
ಯಡಿಯೂರಪ್ಪ ಅವರು 1983 ಶಾಸಕ ಹಾಗೂ 1986 ರಾಜ್ಯ ಘಟಕದ ಅಧ್ಯಕ್ಷ ಅದಾಗಿನಿಂದ ಮುಂಚೂಣಿಯಲ್ಲಿದ್ದಾರೆ. ಯಾವತ್ತೂ ಹಿಂದಕ್ಕೆ ಹೋಗಿಲ್ಲ. 37 ವರ್ಷಗಳಿಂದ ನಾಯಕತ್ವ ವಹಿಸಿದ್ದಾರೆ ಎಂದರು.
ರಾಷ್ಟ್ರೀಯ ಪ್ರ.ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ. ಈಗ ಮಧ್ಯಪ್ರದೇಶದಲ್ಲಿ ಚುನಾವಣಾ ಜವಾಬ್ದಾರಿ ಕೊಟ್ಟಿದ್ದಾರೆ. ಕೆಲಸ ಮಾಡುತ್ತಿದ್ದೇನೆ. ಇದು ಕೂಡ ರಾಷ್ಟ್ರ್ರ ರಾಜಕಾರಣದ ಭಾಗ. ಟಿಕೆಟ್ ಸಂಬಂಧ ಪಟ್ಟಂತೆ ಹೊಳೆ ಬಂದಾಗ ಸೇತುವೆ ದಾಟುವುದು, ದೋಣಿಯಲ್ಲಿ ಹೋಗುವ ಬಗ್ಗೆ ಚಿಂತೆ. ಈಗ ಅಪ್ರಸ್ತುತ ಎಂದವರು ತಿಳಿಸಿದರು.