

ಹಾವೇರಿ: ಎಟಿಎಂನಲ್ಲಿ ಹಣ ಬರುತ್ತಿಲ್ಲ ಸ್ವಲ್ಪ ನೋಡು ಎಂದ ವೃದ್ಧನ ಗಮನ ಬೇರೆಡೆ ಸೆಳೆದು ಆತನ ಖಾತೆಯಿಂದ 80 ಸಾವಿರ ರೂ. ಡ್ರಾ ಮಾಡಿಕೊಂಡ ಕುರಿತು ಇಲ್ಲಿಯ ಶಹರ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.
ಇಲ್ಲಿಯ ಮಾರುತಿ ನಗರದ ಫಕ್ಕೀರಪ್ಪ ಬಸಪ್ಪ ಮೇಲ್ಮುರಿ (60) ಎಂಬುವರಿಗೆ ಮೋಸ ಮಾಡಿರುವುದು.
ಇವರು ನಗರದ ಮಾಗಾವಿ ಚೇಂಬರ್ ಬಳಿಯಿರುವ ಎಸ್‌ಬಿಐ ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಳ್ಳಲು ಹೋಗಿದ್ದರು. ಹಣ ಬಾರದ ಕಾರಣ ಹಿಂದೆ ನಿಂತಿದ್ದ ಅಪರಿಚಿತ ವ್ಯಕ್ತಿಗೆ ಪರಿಶೀಲಿಸಲು ಹೇಳಿದ್ದಾರೆ. ಆತ ಫಕ್ಕೀರಪ್ಪ ಅವರ ಎಟಿಎಂ ಕಾರ್ಡ್ ತೆಗೆದುಕೊಂಡು ಪಾಸ್‌ವರ್ಡ್ ತಿಳಿದುಕೊಂಡಿದ್ದಾನೆ. ನಂತರ ಹಣ ಯಾಕೋ ಬರುತ್ತಿಲ್ಲ ಎಂದು ಹೇಳಿ ಫಕ್ಕೀರಪ್ಪ ಅವರಿಗೆ ಅವರ ಎಟಿಎಂ ಬದಲು ಬೇರೆ ಕಾರ್ಡ್ ಕೊಟ್ಟು ಕಳುಹಿಸಿದ್ದಾನೆ. ನಂತರ ಬೇರೆ ಬೇರೆ ಎಟಿಎಂನಲ್ಲಿ 80 ಸಾವಿರ ರೂ. ಡ್ರಾ ಮಾಡಿಕೊಂಡು ಮೋಸ ಮಾಡಿದ್ದಾನೆ ಎನ್ನಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.