ಮಠ-ಮಾನ್ಯಗಳ ಆಸ್ತಿ ಕಬಳಿಕೆ ಸಲ್ಲ

20 HBH 02
ಹಗರಿಬೊಮ್ಮನಹಳ್ಳಿ ತಾಲೂಕಿನ ನಂದಿಪುರದಲ್ಲಿ ಅರ್ಧನಾರೀಶ್ವರ ಮಾದರಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಿತು. ಶಾಸಕ ಕೆ.ನೇಮಿರಾಜ ನಾಯ್ಕ, ಪ್ರಮುಖರಾದ ಕೌಶಿಕ್‌ರೆಡ್ಡಿ, ಓದೋ ಗಂಗಪ್ಪ, ಪುರಸಭೆ ಅಧ್ಯಕ್ಷ ಮರಿರಾಮಪ್ಪ, ಚಿಂತ್ರಪಳ್ಳಿ ದೇವೇಂದ್ರಪ್ಪ ಇತರರಿದ್ದರು.
Published on

ಹಗರಿಬೊಮ್ಮನಹಳ್ಳಿ: ರಾಜ್ಯದ ರೈತರ ಹಾಗೂ ಮಠಗಳ ಆಸ್ತಿಗಳು ಬೇರೆಯವರ ಹೆಸರಿನಲ್ಲಿ ನೋಂದಣೆಯಾಗುತ್ತಿರುವುದನ್ನು ತಡೆಯಲು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಕೆ.ನೇಮಿರಾಜನಾಯ್ಕ ಹೇಳಿದರು.

ತಾಲೂಕಿನ ನಂದಿಪುರ ಮಠದ ಡಾ.ಮಹೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ಬುಧವಾರ ಆಯೋಜಿಸಿದ್ದ 108 ಅಡಿಗಳ ಅರ್ಧನಾರೀಶ್ವರ ಮಾದರಿಯ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಠ-ಮಾನ್ಯಗಳು ರೈತರ ಹಾಗೂ ಬಡವರ ಪರ ಹೋರಾಟಮಾಡುತ್ತಿದ್ದು, ವಿದ್ಯಾರ್ಥಿಗಳಿಗೆ ಅನ್ನದಾಸೋಹ ಕೈಗೊಂಡು ಉಚಿತ ಶಿಕ್ಷಣ ನೀಡುತ್ತಿವೆ. ಮಠಗಳಿಗೆ ಮಾನ್ಯತೆ ನೀಡಬೇಕೆ ವಿನಃ ಅವುಗಳ ಆಸ್ತಿಗಳನ್ನು ಕಬಳಿಸುವ ಯತ್ನ ಮಾಡಬಾರದು ಎಂದು ರಾಜ್ಯ ಸರ್ಕಾರದ ವಿರುದ್ಧ ಚಾಟಿ ಬೀಸಿದರು. ನಂದಿಪುರ ಕ್ಷೇತ್ರ ಪ್ರವಾಸಿ ತಾಣವಾಗಬೇಕು. ಇಲ್ಲಿ ಉತ್ತಮ ಪರಿಸರ ನಿರ್ಮಾಣವಾಗಬೇಕು. ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.

ಕೊಟ್ಟೂರಿನ ಚಾನುಕೋಟಿ ಮಠದ ಸಿದ್ದಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪ್ರತಿಷ್ಠಾಪಿತವಾಗುವ 108 ಅಡಿ ಎತ್ತರದ ಅರ್ಧನಾರೀಶ್ವರ ಮೂರ್ತಿ ಬಹುತೇಕ 5ಕೋಟಿ ರೂ.ಗಳ ವೆಚ್ಚದ್ದಾಗಿದ್ದು, ಇದಕ್ಕಾಗಿ ಒಂದು ತಂಡವೇ ಶ್ರಮಿಸುತ್ತಿದೆ ಎಂದರು.

ಉತ್ತಂಗಿಯ ಸೋಮಶಂಕರ ಸ್ವಾಮೀಜಿ, ನೀಲಗುಂದ ಚನ್ನಬಸವ ಸ್ವಾಮೀಜಿ, ಬಳ್ಳಾರಿಯ ಕಲ್ಯಾಣ ಸ್ವಾಮೀಜಿ, ಬೆಣ್ಣಿಹಳ್ಳಿಯ ಪಂಚಾಕ್ಷರ ಶಿವಾಚಾರ್ಯ, ಆಂಧ್ರಪ್ರದೇಶದ ಶಂಭುಲಿಂಗ ಶಿವಾಚಾರ್ಯ, ಕೂಡ್ಲಿಗಿಯ ಪ್ರಶಾಂತ ಸಾಗರ ಸ್ವಾಮೀಜಿ, ಹಿರೇಮಲ್ಲನಕೆರೆಯ ಚನ್ನಬಸವ ಸ್ವಾಮೀಜಿ, ಮುತ್ತಿಗಿಯ ಹಾಲಸ್ವಾಮೀಜಿ, ನಾಗತಿಬಸಾಪುರದ ಶಿವಕಂಚಿಮಠ ಮಹಾದೇವ ತಾತನವರು, ಜಾಗಟಗೇರಿಯ ಮಂಜುನಾಥ ಗುರೂಜಿ, ಸಂಡೂರಿನ ಚನ್ನಬಸವ ಸ್ವಾಮೀಜಿ, ಗದ್ದಿಕೆರೆಯ ಚರಂತೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದರು.

ನಂದ್ಯಾಲ್ ಸಂಸದ ಡಾ.ಮಧುಸೂದನ, ಮೂರ್ತಿಯ ವ್ಯವಸ್ಥಾಪಕರಾದ ರಾಮಚೈತನ್ಯ, ಕಾರ್ಯದರ್ಶಿ ಅನಿತಾರೆಡ್ಡಿ, ಶಿಲ್ಪಿ ಬಿ.ವೀರೇಶ ಆಚಾರ್ ಇತರರು ಇದ್ದರು. ಪಕ್ಕೀರಯ್ಯ ಶಾಸ್ತ್ರಿ, ಎ.ಎಂ.ಹಾಲಯ್ಯ ಶಾಸ್ತ್ರಿ, ಉಪನ್ಯಾಸಕ ಗುರುಬಸವರಾಜ, ಬ್ಯಾಲಾಳ ಕರಿಬಸವನಗೌಡ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net