

ಸಿಂಧನೂರು: ಹಾಲುಮತವು ದೈವತ್ವದಲ್ಲಿ ನಂಬಿಕೆ ಇಟ್ಟ ಸಮಾಜವಾಗಿದೆ ಎಂದು ಮೇಘಾಲಯ ರಾಜ್ಯಪಾಲ ಸಿ.ಎಚ್.ವಿಜಯ ಶಂಕರ್ ಹೇಳಿದರು.
ತಾಲೂಕಿನ ತುರ್ವಿಹಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಶ್ರೀ ಗುರು ಅಮೋಘ ಸಿದ್ಧೇಶ್ವರ ಮಠ ಆಯೋಜಿಸಿದ್ದ ಸಂತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಹಾಲುಮತ ಸಮಾಜಕ್ಕೆ ಒಂದು ಇತಿಹಾಸವಿದೆ. ಧಾರ್ಮಿಕ ಆಚರಣೆ, ಪರಂಪರೆ ಅಡಕವಾಗಿದೆ. ಸರ್ವರೂ ಒಪ್ಪುವ, ನಂಬಿಕೆ ಗಳಿಸಿರುವವರು ಹಾಲುಮತ ಸಮಾಜದಲ್ಲಿ ಸಿಗುತ್ತಾರೆ. ಹಾಲಿನಷ್ಟೇ ಪವಿತ್ರ ಹಾಲುಮತ ಸಮಾಜ ಎಂದ ಅವರು, ಮೈಲಾರಲಿಂಗೇಶ್ವರ ಇತಿಹಾಸವು ಸಮಾಜದ ಘನತೆ ಎತ್ತಿ ತೋರಿಸುತ್ತದೆ. ಇಂಥ ಮಠಗಳಿಂದ ಜನರಲ್ಲಿ ಜಾತ್ಯತೀತ ಮನೋಭಾವ ಬಿತ್ತುವ ಕೆಲಸವಾಗಬೇಕು ಎಂದರು.
ಮಾಜಿ ಸಚಿವ ವೆಂಕಟರಾವ ನಾಡಗೌಡ ಮಾತನಾಡಿ, ಸಮಾಜಕ್ಕೆ ಮಠಗಳ ಕೊಡುಗೆ ಅಪಾರವಾಗಿದೆ. ಮಠಗಳಿಂದ ಸಮಾಜದಲ್ಲಿ ಶಾಂತಿ, ಸುಭೀಕ್ಷೆ ನೆಲೆಸಿದೆ. ಅಮೋಘ ಸಿದ್ಧೇಶ್ವರ ಮಠದಿಂದಲೂ ಸಮಾಜಮುಖಿ ಕೆಲಸಗಳು ನಡೆಯುತ್ತಿವೆ ಎಂದರು.
ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಮಾತನಾಡಿ, ಧರ್ಮವನ್ನು ನಾವು ಕಾಪಾಡಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಶ್ರೀಮಠಗಳ ಮಾರ್ಗದರ್ಶನದಿಂದ ಜೀವನ ಕಟ್ಟಿಕೊಳ್ಳಬೇಕು. ಅಧ್ಯಾತ್ಮವನ್ನು ಬಿತ್ತುವ ಕೆಲಸ ಶ್ರೀಮಠ ಮಾಡುತ್ತಿದೆ. ನಮ್ಮ ಸಂಸ್ಕೃತಿ, ಪರಂಪರೆ ಮರೆಯಬಾರದು ಎಂದು ತಿಳಿಸಿದರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿದರು. ಅರಕೇರಿ ಅಪ್ಪು ಒಡೆಯರ್, ಪುರವರಮಠದ ಅಮರಗುಂಡಯ್ಯಸ್ವಾಮಿ, ಗುಂಡಯ್ಯ ಅಪ್ಪಾಜಿ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಶಾಸಕ ಆರ್.ಬಸನಗೌಡ ತುರ್ವಿಹಾಳ, ಮುಖಂಡ ಕೆ.ಕರಿಯಪ್ಪ, ಸರ್ಕಾರದ ವಿಶೇಷ ಅಧಿಕಾರಿ ಚಂದ್ರಶೇಖರ, ಎಚ್.ಡಿ.ಪಾಟೀಲ್, ಎಂ.ದೊಡ್ಡಬಸವರಾಜ ಇತರರಿದ್ದರು.