

ಹನೂರು: ತಾಲೂಕಿನ ಮಣಗಳ್ಳಿ ಸಮೀಪದ ಗುರುಗಳ ದೊಡ್ಡಿ ಗ್ರಾಮದಲ್ಲಿ ಶುಕ್ರವಾರ ಉರುಲಿಂಗಿ ಪೆದ್ದಿ ಶಾಖಾ ಮಠದ ಗದ್ದುಗೆ ಹಾಗೂ ದಾಸೋಹ ಭವನ ನಿರ್ಮಾಣ ಕಾಮಗಾರಿಗೆ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಅವರು ಶಾಸಕ ಎಂ.ಆರ್.ಮಂಜುನಾಥ್ ಜತೆಗೂಡಿ ಭೂಮಿಪೂಜೆ ನೆರವೇರಿಸಿದರು.
ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಈ ಭಾಗದಲ್ಲಿ ಶ್ರೀ ಶಿವಾನಂದ ಸ್ವಾಮೀಜಿ ಅವರು ಸ್ವಾತಂತ್ರ್ಯ ಪೂರ್ವದಲ್ಲೇ ಪ್ರವಾಸವನ್ನು ಕೈಗೊಳ್ಳುವುದರ ಮೂಲಕ ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಉತ್ತಮ ಸೇವೆ ಸಲ್ಲಿಸುವುದರ ಮೂಲಕ ಸಾಮಾಜಿಕ ಪರಿವರ್ತಕರಾಗಿದ್ದರು. ಆದರೆ 1955ರಲ್ಲಿ ಲಿಂಗೈಕ್ಯರಾಗಿದ್ದಾರೆ. ಇವರು ದಾಸೋಹ ಭವನವನ್ನು ನಿರ್ಮಿಸಿ ಭಕ್ತರಿಗೆ ಅನುಕೂಲ ಕಲ್ಪಿಸಬೇಕು ಎಂದು ಮಹಾದಾಸೆಯನ್ನು ಹೊಂದಿದ್ದರು. ಆದರೆ ಸಾಧ್ಯವಾಗಿರಲಿಲ್ಲ. ಇದೀಗ ಶಾಸಕ ಎಂ.ಆರ್.ಮಂಜುನಾಥ್ ಅವರು ಈ ಬಗ್ಗೆ ಕಾಳಜಿ ವಹಿಸಿ ಅನುದಾನವನ್ನು ನೀಡುವುದರ ಮೂಲಕ ಶ್ರೀಗಳ ಕರ್ತೃ ಗದ್ದುಗೆ ಹಾಗೂ ದಾಸೋಹ ಭವನ ನಿರ್ಮಾಣಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಈ ಕಾರ್ಯಕ್ಕೆ ವಿಧಾನ ಪರಿಷತ್ ಸದಸ್ಯ ಸುಧಾಮ್ ದಾಸ್ ಅವರು ಅನುದಾನ ನೀಡಿದ್ದಾರೆ. ಹಾಗೆಯೇ ಸಂಸದ ಸುನೀಲ್ ಬೋಸ್ ಅವರು 20 ಲಕ್ಷ ರೂ.ಅನುದಾನ ನೀಡುವ ಭರವಸೆ ನೀಡಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಈ ಭಾಗದ ಭಕ್ತರಿಗೆ ಅನುಕೂಲವಾಗಲಿದೆ. ಸಂಪೂರ್ಣ ಜವಾಬ್ದಾರಿಯನ್ನು ಶಾಸಕರು ವಹಿಸಿಕೊಂಡಿರುವುದು ಮೆಚ್ಚುವ ಸಂಗತಿ. ಶಾಸಕ ಎಂ.ಆರ್. ಮಂಜುನಾಥ್ ಅವರು ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತನ್ನು ನೀಡಿದ್ದು, ಹನೂರು ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ, ಮಠಗಳು ಧಾರ್ಮಿಕತೆ ಜತೆಗೆ ಶೈಕ್ಷಣಿಕ ಹಾಗೂ ಸಾಮಾಜಿಕ ಪರಿವರ್ತನೆಯ ಕೇಂದ್ರವಾಗಿದ್ದು, ಉತ್ತಮ ಸಮಾಜಕ್ಕೆ ದಾರಿ ದೀಪವಾಗಿದೆ. ಈ ದೆಸೆಯಲ್ಲಿ ಈ ಭಾಗದ ಉರಿಲಿಂಗಿ ಪೆದ್ದಿ ಶಾಖಾ ಮಠದಲ್ಲಿ ಗದ್ದುಗೆ ಹಾಗೂ ದಾಸೋಹ ಭವನ ನಿರ್ಮಾಣಕ್ಕೆ ಭೂಮಿಪೂಜೆಯನ್ನು ನೆರವೇರಿಸಲಾಗಿದ್ದು, ಭಕ್ತರಿಗೆ ಅನುಕೂಲವಾಗಲಿದೆ ಎಂದರು.
ಶಾಖಾ ಮಠದ ಶ್ರೀ ಸಿದ್ದರಾಮ ಸ್ವಾಮೀಜಿ, ಜಿಪಂ ಮಾಜಿ ಸದಸ್ಯ ಶಿವಪ್ಪ, ಗ್ರಾಪಂ ಸದಸ್ಯ ಸಿದ್ದರಾಜು, ಮುಖಂಡರಾದ ಮಹಾಲಿಂಗ, ಗುರುಸ್ವಾಮಿ, ಚನ್ನಯ್ಯ, ಶಿವಲಿಂಗಯ್ಯ, ಮಹದೇವಯ್ಯ, ಕೆಂಪರಾಜು, ತಮ್ಮೇಗೌಡ, ಅತೀಕ್, ರಖೀಬ್ ಇತರರು ಇದ್ದರು.