

ಆಲ್ದೂರು: ಮಠಗಳು ಜನರನ್ನು ಧಾರ್ಮಿಕವಾಗಿ ಹಿಡಿದಿಡುವ ಶಕ್ತಿ ಕೇಂದ್ರಗಳು. ನೆಮ್ಮದಿ ನೀಡುವ ತಾಣ ಎಂದು ಬೇರುಗಂಡಿ ಬೃಹನ್ಮಠದ ಶ್ರೀ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಬೇರುಗಂಡಿ ಬೃಹನ್ಮಠದಲ್ಲಿ ಶುಕ್ರವಾರ ಶ್ರಾವಣ ಮಾಸದ ಪೂಜೆ ಸಮಾರೋಪದಲ್ಲಿ ಮಾತನಾಡಿ, ಬೇರೆಯವರನ್ನು ಬದಲಾಯಿಸುವ ಬದಲು ನಮ್ಮ ದಷ್ಟಿಕೋನ ಬದಲಾಯಿಸಿಕೊಳ್ಳಬೇಕು. ಪೂರ್ವಿಕರ ಆಚಾರ ವಿಚಾರಗಳನ್ನು ಉಳಿಸಿಕೊಂಡು ಹೋಗಬೇಕು ಎಂದರು.
ಆಲ್ದೂರು ಪೂರ್ಣಪ್ರಜ್ಞಾ ಶಾಲೆ ಕಾರ್ಯದರ್ಶಿ ಬಿ.ಬಿ.ರೇಣುಕಾರ್ಯ ಮಾತನಾಡಿ, ಮಠ ಬೆಳೆದು ಬಂದ ಹಾದಿ ಬಹಳ ಕಠಿಣವಾಗಿತ್ತು. ಗುರುಗಳು ಮಠವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ. ಇದಕ್ಕೆ ಭಕ್ತರ ಸಹಕಾರವೂ ಮುಖ್ಯ ಎಂದರು.
ಅಖಿಲ ಭಾರತ ವೀರಶೈವ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ವನಮಾಲಾ ಮೃತ್ಯುಂಜಯ ಮಾತನಾಡಿದರು. ಜ್ಯೋತಿಷಿ ಡಾ. ಡಿ.ಆರ್.ಗಣೇಶ್ ಶರ್ಮ ಅವರಿಗೆ ಜ್ಯೋತಿಷ್ಯ ಶಾರದಾ ಬಿರುದು ನೀಡಿ ಗೌರವಿಸಲಾಯಿತು. ಆಲ್ದೂರು ಹೋಬಳಿ ವೀರಶೈವ ಸಮಾಜದ ಅಧ್ಯಕ್ಷ ಎ.ಎಸ್.ಮಹೇಶ್, ಮಹೇಶ್ವರಯ್ಯ, ಬಿ.ಎಂ.ಶಂಕರೇಗೌಡ, ಭುವನೇಶ್ವರಿ ಶಿವರಾಜ್, ಡಾ. ದಯಾನಂದ ಶಾಸ್ತ್ರಿ ಅವರಿಗೆ ಗುರುರಕ್ಷೆ ನೀಡಿ ಗೌರವಿಸಲಾಯಿತು.
ಬೆಳಗ್ಗೆ ಸಿದ್ದೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಅಷ್ಟೋತ್ತರ ಶತನಾಮಾವಳಿ, ಚೌಡೇಶ್ವರಿ ದೇವಿಗೆ ಕುಂಕುಮಾರ್ಚನೆ ಜರುಗಿತು.
ಹೋಬಳಿ ವೀರಶೈವ ಸಮಾಜದ ಗೌರವ ಅಧ್ಯಕ್ಷ ಇ.ಸಿ.ಉಮೇಶ್, ಸಾಹಿತಿ ತಿಪ್ಪೇರುದ್ರಪ್ಪ, ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ , ನಾರಾಯಣ್ ಆಚಾರ್ಯ, ಬೇರುಗಂಡಿ ಉಮೇಶ್ ಇತರರಿದ್ದರು.