ಕಾಲಭೈರವ ಸ್ವಾಮಿ ಜಾತ್ರೆ ಮಹೋತ್ಸವ

MLK JATRE 10 (3)
Published on

ಮೊಳಕಾಲ್ಮೂರು: ಇಲ್ಲಿನ ನುಂಕೆಮಲೆ ಬೆಟ್ಟದಲ್ಲಿ ಸೋಮವಾರ ಶ್ರೀ ಕಾಲಭೈರವ ಸ್ವಾಮಿ ಜಾತ್ರೆ ಮಹೋತ್ಸವ ಅದ್ದೂರಿಯಾಗಿ ನೆರವೇರಿತು.

ಪ್ರತಿ ಮೂರು ವರ್ಷಕ್ಕೊಮ್ಮೆ ನಾಲ್ಕು ದಿನಗಳ ಕಾಲ ನಡೆಯುವ ಜಾತ್ರೆಗೆ ಸಾವಿರಾರು ಭಕ್ತರು ಆಗಮಿಸಿದ್ದರು. ಭಾನುವಾರ ಬೆಳಗ್ಗೆ ಬೆಟ್ಟದಲ್ಲಿನ ಮೂಲ ಗುಡಿಯಲ್ಲಿ ದೇವರಿಗೆ ವಿಶೇಷ ಅಲಂಕಾರ ಮತ್ತು ಮಹಾ ಪೂಜೆ ಜರುಗಿತು.

ಮಧ್ಯಾಹ್ನ ಮೆರವಣಿಗೆಯೊಂದಿಗೆ ಪಟ್ಟಣಕ್ಕೆ ಕರೆತಂದು ಪ್ರಮುಖ ರಸ್ತೆಗಳಲ್ಲಿ ಪಲ್ಲಕ್ಕಿ ಉತ್ಸವ ನೆರವೇರಿಸಲಾಯಿತು. ಕೋಟೆ ಬಡಾವಣೆಯಲ್ಲಿರುವ ನುಂಕಪ್ಪನ ಕಟ್ಟೆಯಲ್ಲಿ ಪ್ರತಿಷ್ಠಾಪಿಸಿದ ನಂತರ ವಿವಿಧ ಪೂಜೆ ಕಾರ್ಯ ನೆರವೇರಿದವು.

ರಾತ್ರಿ 10.30ಕ್ಕೆ ಸಮೀಪದ ಕಂಪರಾಯನ ಬೆಟ್ಟಕ್ಕೆ ತೆರಳಿ ಗಂಗಾಪೂಜೆ ನೆರವೇರಿಸಿದ ಬಳಿಕ ಜಾಗರಣೆ ನಡೆಸಲಾಯಿತು. ಸೋಮವಾರ ಪುನಃ ದೇವರನ್ನು ಮೂಲ ಕಟ್ಟೆಯಲ್ಲಿ ಪ್ರತಿಷ್ಠಾಪಿಸಲಾಯಿತು.

ಭಕ್ತರು ಹಣ್ಣು, ಕಾಯಿ, ಹೂವು ಸಮರ್ಪಿಸಿ ಭಕ್ತಿ ಮೆರೆದರು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಉತ್ಸವಕ್ಕೆ ಆಂಧ್ರ ಮತ್ತು ಕರ್ನಾಟಕದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net