ಅಕ್ಷರ ಕಲಿಕೆ ಜತೆ ಪರಿಸರ ಪಾಠ

Molokalmuru, Murarji School, Salamaru Thimmakka,
Published on

ಕೆ.ಕೆಂಚಪ್ಪ ಮೊಳಕಾಲ್ಮೂರು: ಸರ್ಕಾರಿ ಮುರಾರ್ಜಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಜತೆ ಹಸಿರು ವಾತಾವರಣದ ಮೂಲಕ ತಾಲೂಕಿನಲ್ಲಿ ಬಹು ಬೇಡಿಕೆಯ ವಿದ್ಯಾಕೇಂದ್ರವಾಗಿ ಗುರುತಿಸಿಕೊಂಡಿದೆ.

ಶಾಲೆಯ ವಿದ್ಯಾರ್ಥಿಗಳ ನಿತ್ಯ ಕಾಕದಿಂದ ಆವರಣದಲ್ಲಿ ವೃಕ್ಷ ಸಂಪತ್ತು ಕಂಗೊಳಿಸುತ್ತಿದೆ. ಶಿಕ್ಷಣ ಮಾತ್ರವಲ್ಲದೇ ಸಾಂಸ್ಕೃತಿಕ, ಪರಿಸರ ಕಾಳಜಿಯಲ್ಲಿ ಛಾಪು ಮೂಡಿಸಿ ಕಲಿಕಾಸಕ್ತರಿಗೆ ಉತ್ತಮ ವಾತಾವರಣ ಕಲ್ಪಿಸಿದೆ.

ಸುಸಜ್ಜಿತ ಕಟ್ಟಡದಲ್ಲಿ 2005-06ನೇ ಸಾಲಿನಲ್ಲಿ ಪ್ರಾರಂಭವಾದ ಈ ಶಾಲೆಯಲ್ಲಿ ಪ್ರಸ್ತುತ 1 ರಿಂದ 10ನೇ ತರಗತಿಯ 240 ಮಕ್ಕಳಿದ್ದಾರೆ. ಆಟದ ಮೈದಾನ, ಬಯಲು ರಂಗಮಂದಿರ, ವಸತಿ ಸೌಲಭ್ಯದ ಸಮುಚ್ಚಯ, ರಸ್ತೆ, ಚರಂಡಿ ಹೀಗೆ ಹಲವು ಕಟ್ಟಡಗಳ ನಡುವೆ ಇರುವ ಜಾಗವನ್ನು ಶಿಕ್ಷಕರು, ವಿದ್ಯಾರ್ಥಿಗಳು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಲಭ್ಯ ನೀರಿನಲ್ಲಿ ಹತ್ತಾರು ಜಾತಿಯ ಸಸ್ಯಗಳನ್ನು ಬೆಳೆಸಿ, ಅರೆ ಮಲೆನಾಡಿನ ಪರಿಸರ ನಿರ್ಮಿಸಿದ್ದಾರೆ.

ಆವರಣದಲ್ಲಿ ಕಾಡು ಬದಾಮಿ, ಹಲಸು, ಮಾವು, ತೆಂಗು, ಹೊಂಗೆ, ನೇರಳೆ, ಸೀತಾಫಲ, ಅರಳಿ, ಆಲ, ನೆಲ್ಲಿ ಸೇರಿ ಹಲವು ಜಾತಿಯ ಸಾಲು ಮರಗಳಿವೆ. ಇದರ ನಡುವೆ ನುಗ್ಗೆ, ಕರಿಬೇವು, ಕಾಯಿ ಪಲ್ಯೆ ಹಾಗೂ ತರಕಾರಿ ಕೈತೋಟ ಸಮೃದ್ಧವಾಗಿದೆ.

 ಅಭ್ಯಾಸಕ್ಕೆ ಶಾಂತ ವಾತಾವರಣ: ಶಾಲೆಯಲ್ಲಿ ಜನ್ಮದಿನ ಆಚರಿಸಿಕೊಳ್ಳುವ ವಿದ್ಯಾರ್ಥಿಗಳ ಹೆಸರಿನಲ್ಲಿ ಒಂದು ಗಿಡವನ್ನು ಉಡುಗೊರೆಯಾಗಿ ನೀಡಿ ಅವರ ಹೆಸರಿನಲ್ಲಿ ಸಾಕಿ ಬೆಳೆಸುವ ಹೊಣೆಗಾರಿಕೆ ಕೊಟ್ಟಿರುವುದು ಈ ಪ್ರಗತಿಗೆ ಕಾರಣವಾಗಿದೆ. ಮಕ್ಕಳು ನಿತ್ಯ ಬೆಳಗ್ಗೆ ಮತ್ತು ಸಂಜೆ ಶಾಲಾ ಬಿಡುವಿನ ವೇಳೆ ಸಾಲು ಮರದಡಿ ಕೂತು ಅಭ್ಯಾಸ ಮಾಡುತ್ತಾರೆ.

ಸಾಲುಮರದ ತಿಮ್ಮಕ್ಕ ಮಾದರಿ: ಪರಿಸರ ಕಾಳಜಿ ಬಗ್ಗೆ ಮಕ್ಕಳಲ್ಲಿ ಹೆಚ್ಚು ಉತ್ತೇಜನ ನೀಡಲೆಂದು 4 ವರ್ಷಗಳ ಹಿಂದೆ ವೃಕ್ಷಮಾತೆ ತಿಮ್ಮಕ್ಕ ಅವರನ್ನು ಕರೆಸಲಾಗಿತ್ತು. ಇದು ಮಕ್ಕಳಿಗೆ ಪ್ರೇರಣೆಯಾಗಿದ್ದರಿಂದ ಅವರು ನೆಟ್ಟಿರುವ ಗಿಡದ ಮೇಲೆ ಅಪಾರ ಪ್ರೀತಿ, ವಿಶ್ವಾಸ ತೋರಿ ಆರೈಕೆ ಮಾಡಿದ್ದಾರೆ.

ಪಾಠ- ಆಟದಲ್ಲೂ ಮುಂದು: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಸತತ 6ನೇ ಬಾರಿ ಟಾಪರ್ ಆಗಿ ಹೊರಹೊಮ್ಮಿದೆ. ಕ್ರೀಡಾ ಕ್ಷೇತ್ರದಲ್ಲಿ ರಾಜ್ಯಮಟ್ಟದಲ್ಲೂ ಭಾಗವಹಿಸಿರುವ ಹೆಗ್ಗಳಿಕೆ ಇದೆ. ಸಾಂಸ್ಕೃತಿಕ ಚಟುವಟಿಕೆಗಳಿಗೆ ವಿಶಾಲ ಬಯಲು ರಂಗಮಂದಿರ, ಬಾಸ್ಕೆಟ್ ಬಾಲ್, ಥ್ರೋಬಾಲ್, ಬ್ಯಾಡ್ಮಿಂಟನ್, ಖೋಖೋ, ಕಬಡ್ಡಿ, ಚೆಸ್ ಆಟೋಟಗಳಿಗೆ ಸೂಕ್ತ ಸ್ಥಳಾವಕಾಶ ಇದೆ. ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ, ಜಿಮ್, ಸ್ಮಾರ್ಟ್‌ಕ್ಲಾಸ್ ಮತ್ತಿತರ ಶಿಕ್ಷಣದ ಮೂಲಸೌಕರ್ಯಗಳಿದ್ದು, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶದಲ್ಲಿ ಯಾವುದೂ ಕೊರತೆ ಆಗದಂತೆ ಖಾಸಗಿ ಶಾಲೆಗಳನ್ನು ಮೀರಿಸುವಂತಿದೆ.

ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಶಿಕ್ಷಕರ ನಡುವೆ ಉತ್ತಮ ಸಂಯೋಜನೆ, ಸಹಕಾರ ಇದೆ. ವಿಷಯವಾರು ಸ್ಪರ್ಧಾತ್ಮಕ ಪೈಪೋಟಿ ನೀಡುತ್ತ, ಮಕ್ಕಳಲ್ಲಿ ಛಲ ತುಂಬುತ್ತ, ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಮದರಿಯಾಗಿಸಿ, ಎಲ್ಲರಿಗೂ ಉತ್ತೇಜನ ನೀಡಲಾಗುತ್ತಿದೆ. ಆರ್.ನೀಲಾಂಬಿಕಾ, ಪ್ರೇಮಲತಾ, ವಿದ್ಯಾರ್ಥಿನಿಯರು.

ನಮ್ಮ ಶಾಲೆಯಲ್ಲಿ ಗ್ರಾಮೀಣ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರು ಉನ್ನತ ವ್ಯಾಸಂಗ ಮಾಡಲು ಅನುಕೂಲವಾಗುವಂತೆ ಗುಣಮಟ್ಟದ ಶಿಕ್ಷಣ ಕೊಡಲಾಗುತ್ತದೆ. ಮಕ್ಕಳು ಸಹ ಶಿಸ್ತು, ಸಂಯಮ, ಶ್ರದ್ಧೆಯಿಂದ ಕಲಿಯುತ್ತಿದ್ದಾರೆ. ಇದರಿಂದ ಪ್ರತಿ ವರ್ಷ 6 ರಿಂದ 10 ನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುತ್ತಿದೆ. ಎಚ್.ನಾಗರಾಜ್ ಪ್ರಾಂಶುಪಾಲ, ಮುರಾರ್ಜಿ ದೇಸಾಯಿ ವಸತಿ ಶಾಲೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net