

ಮೊಳಕಾಲ್ಮೂರು: ಪಟ್ಟಣದ ಐತಿಹಾಸಿಕ ನುಂಕೆಮಲೆ ಸಿದ್ದೇಶ್ವರಸ್ವಾಮಿ ದೇವಸ್ಥಾನ ತೆರವು ಆದೇಶ ರದ್ದತಿಗೆ ಆಗ್ರಹಿಸಿ ಮಂಗಳವಾರ ದೇವಸ್ಥಾನ ಕಮಿಟಿ ಪದಾಧಿಕಾರಿಗಳು, ಊರಿನ ಪ್ರಮುಖರು ಶಿರಸ್ತೇದಾರ್ ಪುಷ್ಪಾ ಅವರಿಗೆ ಮನವಿ ಸಲ್ಲಿಸಿದರು.
ಊರಿನ ಮುಖಂಡ ಚಂದ್ರಶೇಖರಗೌಡರ್ ಮಾತನಾಡಿ, ನಗರ-ಪಟ್ಟಣಗಳಲ್ಲದೆ ಗ್ರಾಮೀಣ ಪ್ರದೇಶದಲ್ಲಿ ಮುಜರಾಯಿ ಇಲಾಖೆಗೆ ಒಳಪಡದೆ ಸರ್ಕಾರಿ ಸ್ವಾಮ್ಯದ ಜಾಗದಲ್ಲಿ ಕಟ್ಟಿರುವ ದೇವಸ್ಥಾನಗಳನ್ನು ತೆರವುಗೊಳಿಸಬೇಕೆಂಬ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆ ಇಲ್ಲಿನ ಐತಿಹಾಸಿಕ ನುಂಕೆಮಲೆ ಸಿದ್ದೇಶ್ವರ ಹಾಗೂ ಬನ್ನಿಮಹಾಂಕಾಳಿ ದೇವಸ್ಥಾನ ತೆರವುಗೊಳಿಸಲು ಮುಂದಾಗಿರುವ ಅಧಿಕಾರಿಗಳ ನಡೆ ಸರಿಯಲ್ಲವೆಂದು ದೂರಿದರು.
ಸಿದ್ದೇಶ್ವರ ಸ್ವಾಮಿಗೆ ಆಂಧ್ರ ಮತ್ತು ಕರ್ನಾಟಕದಲ್ಲಿ ಲಕ್ಷಾಂತರ ಭಕ್ತರಿದ್ದಾರೆ. ನಿತ್ಯವೂ ರಾಜ್ಯದೆಲ್ಲೆಡೆಯಿಂದ ಹತ್ತಾರು ಭಕ್ತರು ಬಂದು ಹೋಗುತ್ತಾರೆ. ಬಾವಿಯನ್ನು ಮುಚ್ಚಿಸಿ ಆ ಜಾಗದಲ್ಲಿಯೇ ದೇಗುಲ ಕಟ್ಟಲಾಗಿದೆ. ಇದರ ಸುತ್ತ ಗಿಡಮರ ಬೆಳಸಲಾಗಿದೆ. ಭಕ್ತರ ಅನುಕೂಲಕ್ಕಾಗಿ ಪಟ್ಟಣ ಪಂಚಾಯಿತಿ ಶುದ್ಧ ನೀರು ಘಟಕ ಸ್ಥಾಪಿಸಿದೆ. ಮುಖ್ಯವಾಗಿ ಈ ಸ್ಥಳ ದೈವಿಕವಾಗಿದೆ. ಈ ಬಗ್ಗೆ ಪಪಂ ಮುಖ್ಯಾಧಿಕಾರಿ ಹಾಗೂ ತಹಸೀಲ್ದಾರ್ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಟ್ಟು ತೆರವು ಕಾರ್ಯ ಸ್ಥಗಿತಗೊಳಿಸಬೇಕೆಂದು ಮನವಿ ಮಾಡಿದರು.
ಮುಖಂಡರಾದ ಬಂಗಾರು ಮೂಕಣ್ಣ, ಕೆ. ಕೇಶವಮೂರ್ತಿ, ಪಟೇಲ್ ಜಿ. ಪಾಪನಾಯಕ, ವಕೀಲ ಪಿ.ಜಿ. ವಸಂತಕುಮಾರ್, ಟಿ. ರವಿಕುಮಾರ್, ಪಾಳೇಗಾರ ಸಿದ್ದಣ್ಣ, ಭೀಮಣ್ಣ, ವಿನಯ್, ಲಕ್ಷ್ಮಣ, ಶಾಂತಾರಾಮ್ ಇತರರಿದ್ದರು.