

ಮೊಳಕಾಲ್ಮೂರು: ಲಾಕ್‌ಡೌನ್‌ನಿಂದ ಉದ್ಯೋಗವಿಲ್ಲದೆ ಸಂಕಷ್ಟದಲ್ಲಿರುವ ಟ್ಯಾಕ್ಸಿ ಚಾಲಕರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಡಾ.ಮಂಜುನಾಥ ತಿಳಿಸಿದರು.
ನಗರದ ಶಾಸಕರ ಕೊಠಡಿ ಮುಂಭಾಗ ಭಾನುವಾರ ಆರೋಗ್ಯ ಸಚಿವ ಶ್ರೀರಾಮುಲು ಅವರ ಸೂಚನೆ ಮೇರೆಗೆ 50 ಟ್ಯಾಕ್ಸಿ ಚಾಲಕರಿಗೆ ಆಹಾರದ ಕಿಟ್ ವಿತರಿಸಿ ಮಾತನಾಡಿದರು.
ಕರೊನಾ ಎಲ್ಲರ ಬದುಕನ್ನು ಕಸಿದುಕೊಂಡಿದೆ. ಇದು ಸರ್ಕಾರದ ಗಮನಕ್ಕೂ ಬಂದಿದ್ದು, ಸಂಕಷ್ಟಕ್ಕೆ ನೆರವಾಗುವ ಕ್ರಮ ಕೈಗೊಂಡಿದೆ. ಯಾರೂ ಧೈರ್ಯಗೆಡಬೇಕಿಲ್ಲ. ಮುಖ್ಯವಾಗಿ ರೈತ ಹಾಗೂ ಕಾರ್ಮಿಕರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗಿದೆ ಎಂದರು.
ಜಿಲ್ಲೆಯ ಸಚಿವರು, ಸಂಸದರು ತೀರಾ ಹಿಂದುಳಿದ ತಾಲೂಕಿನ ಜನರ ಸಂಕಷ್ಟ ನೀಗಿಸಲು ಪರ್ಯಾಯ ಮಾರ್ಗೋಪಾಯ ಕಂಡುಕೊಳ್ಳುವ ಕಾರ್ಯಕ್ಕೆ ಒತ್ತುಕೊಡಬೇಕು ಎಂದು ತಿಳಿಸಿದರು.
ಸಚಿವರ ಆಪ್ತ ಸಹಾಯಕ ಪಾಪೇಶ್ ನಾಯಕ, ಬಿಜೆಪಿ ನಗರಾಧ್ಯಕ್ಷ ಶಾಂತಾರಾಮ್, ಸಂಜೀವಮೂರ್ತಿ, ಮಂಜುನಾಥ, ಪರಮೇಶಿ, ಪಪಂ ಸದಸ್ಯರಾದ ಟಿ.ರವಿಕುಮಾರ್, ತಿಪ್ಪೇಸ್ವಾಮಿ, ರಘು, ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಗಿರೀಶ್, ಉಪಾಧ್ಯಕ್ಷ ತಿಪ್ಪೇಸ್ವಾಮಿ, ಕಾರ್ಯದರ್ಶಿ ಗಂಗಾಧರ, ಶ್ರೀನಿವಾಸ, ಮಂಜುನಾಥ ಇತರರಿದ್ದರು.