ಮಂಡ್ಯ: ಮೈಸೂರು ಸಕ್ಕರೆ ಕಾರ್ಖಾನೆಯಲ್ಲಿ ಟ್ಯಾಂಕ್ ಹೊಡೆದು ಸಾವಿರಾರು ಲೀಟರ್ ಮೊಲಾಸಸ್ ಸೋರಿಕೆಯಾಗಿ ಚರಂಡಿ ಸೇರಿದೆ. ಇದರಿಂದ ಕಾರ್ಖಾನೆಗೆ ಲಕ್ಷಾಂತರ ರೂ. ನಷ್ಟವಾಗಿದೆ.
ಒಂದು ಟನ್ ಮೊಲಾಸಸ್ ಗೆ 13,500 ರೂ ಇದೆ. ಕಾರ್ಖಾನೆಯವರ ನಿರ್ಲಕ್ಷೃದಿಂದಾಗಿ ಇಂತಹ ಅವಘಡ ನಡೆದಿದೆ. ಆದ್ದರಿಂದ ಹಣಕಾಸಿನ ವಿಭಾಗದಿಂದ ರೈತರ ಹೊರತುಪಡಿಸಿ ತಾಂತ್ರಿಕ ವಿಭಾಗ ಮತ್ತು ಆರ್‌ಬಿ.ಟೆಕ್ ಕಂಪನಿಗೆ ಹಣ ಬಿಡುಗಡೆ ಮಾಡುವುದನ್ನು ತಕ್ಷಣದಲ್ಲೇ ನಿಲ್ಲಿಸಬೇಕು. ತಾಂತ್ರಿಕ ವಿಭಾಗ, ಹಣಕಾಸಿನ ವಿಭಾಗವನ್ನು ಜಿಲ್ಲಾ ಕೈಗಾರಿಕಾ ಇಲಾಖೆ ಹಾಗೂ ಜಿಲ್ಲಾಧಿಕಾರಿ ಮುಟ್ಟುಗೋಲು ಹಾಕಿಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಸಾತನೂರು ವೇಣುಗೋಪಾಲ್ ಒತ್ತಾಯ ಮಾಡಿದ್ದಾರೆ.
ಇನ್ನು ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ, ಮೊಲಾಸಸ್ ಟ್ಯಾಂಕ್ ಹೊಡೆದಿಲ್ಲ, ಓವರ್ ಲೋಡ್ ಆಗಿ ಸೋರಿಕೆಯಾಗಿದೆ. ತಕ್ಷಣವೇ ಅಧಿಕಾರಿಗಳು ಗಮನಹರಿಸಿ, ಕಬ್ಬು ನುರಿಸುವುದನ್ನು ಸ್ಥಗಿತಗೊಳಿಸಿ ಮೊಲಾಸಸ್ ಟ್ಯಾಂಕ್‌ಗೆ ಹೋಗದಂತೆ ಮಾಡಿದ್ದಾರೆ. ಕೊಪ್ಪ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಯವರು ಮಲಾಸಸ್ ಟೆಂಡರ್ ಪಡೆದಿದ್ದು, ಆ ಕಾರ್ಖಾನೆಯ ಟ್ಯಾಂಕರ್‌ಗಳು ಬಂದು ಮಲಾಸಸ್‌ನ್ನು ತೆಗೆದುಕೊಂಡು ಹೋಗಿವೆ ಎಂದಿದ್ದಾರೆ.