

ಬೆಂಗಳೂರು: ಸನಾತನ ಧರ್ಮ, ಪರಂಪರೆಗೆ ಮೂಲಾಧಾರವಾಗಿರುವ ವೇದ ಉಳಿಯಬೇಕಾದರೆ ವೈದಿಕರು ಉಳಿಯಬೇಕು. ವೈದಿಕರು ಉಳಿದರೆ ಭಾರತೀಯ ಆಸ್ತಿಕತೆ ಉಳಿಯುತ್ತದೆ ಎಂದು ಸುರಭಾರತಿ ಧರ್ಮಕರ್ತರಾದ ವಿದ್ವಾನ್ ಕೆ.ಎಲ್.ಶ್ರೀನಿವಾಸ್ ಹೇಳಿದ್ದಾರೆ. ಹವ್ಯಕ ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ 81 ವೈದಿಕರಿಗೆ ‘ಹವ್ಯಕ ವೇದರತ್ನ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ವೇದ ಸಂಸ್ಕೃತಿಯನ್ನು ಸಂರಕ್ಷಿಸುವುದಕ್ಕೆ ಶ್ರಮಿಸುತ್ತಿರುವ ವೈದಿಕರ ಕೊಡುಗೆ ಅಪಾರ. ಸಮಾಜ, ನಾಡು, ದೇಶದ ಹಿತಕ್ಕಾಗಿ ಸದಾ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲು ನಮ್ಮೆಲ್ಲರ ಪ್ರತಿನಿಧಿಗಳಂತೆ ಕಾರ್ಯ ನಿರ್ವಹಿಸುತ್ತಿರುವ ವೈದಿಕರನ್ನು ಸನ್ಮಾನಿಸುವುದೆಂದರೆ ಸಾಕ್ಷಾತ್ ಭಗವಂತನನ್ನೇ ಗೌರವಿಸಿದಂತೆ. ಎಲ್ಲಿ ವೇದ ಪಂಡಿತರ ಉಪಸ್ಥಿತಿ ಇರುತ್ತದೆಯೋ ಅಲ್ಲಿ ಭಗವಂತನ ಸಾನಿಧ್ಯವಿರುತ್ತದೆ. ಇಷ್ಟು ದೊಡ್ಡ ಸಂಖ್ಯೆಯ ವೈದಿಕರನ್ನು ಒಂದೇ ವೇದಿಕೆಯಲ್ಲಿ ಸನ್ಮಾನಿಸುವ ಮೂಲಕ ಹವ್ಯಕ ಮಹಾಸಭೆ ಹೊಸ ದಾಖಲೆ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ 81 ವೈದಿಕರನ್ನು ವಿದ್ವಾಂಸರಾದ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ, ವೇ.ಮೂ.ಶ್ರೀಧರ ಅಡಿಗ, ದೈವಜ್ಞ ಸಚ್ಚಿದಾನಂದ ಬಾಬು, ವೇ.ಮೂ.ಬಾಲಚಂದ್ರ ಭಟ್ ಮತ್ತು ಡಾ.ಕೆ.ಎಲ್.ಶಂಕರನಾರಾಯಣ ಜೋಯಿಸರು ಸನ್ಮಾನಿಸಿದರು. ಈ ವೇಳೆ ಎಲ್ಲ ವೈದಿಕರು ಮಾಡಿದ ವೇದೋಷ ಸಭಾಂಗಣದಲ್ಲಿ ಮೊಳಗಿತು. ಸಂಜೆ ನಡೆದ ಸಮಾರಂಭದಲ್ಲಿ 81ಶಿಕ್ಷಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಹೃದ್ರೋಗ ತಜ್ಞೆ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ ದಿಕ್ಸೂಚಿ ಭಾಷಣ ಮಾಡಿದರು. ಡಾ.ಮಲ್ಲೇಪುರಂ ವೆಂಕಟೇಶ, ಡಾ.ನಿರಂಜನ ವಾನಳ್ಳಿ, ಡಾ.ಎಸ್.ವಿದ್ಯಾಶಂಕರ್, ಡಾ.ಅಹಲ್ಯಾ ಶರ್ಮ, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಡಾ.ಕೆ.ಪಿ. ಪುತ್ತೂರಾಯ, ಪಂ.ವಿನಾಯಕ ತೊರವಿ, ಮುರಳೀಧರ ಪ್ರಭು ಮತ್ತಿತರರು ಪಾಲ್ಗೊಂಡಿದ್ದರು. 81 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸಂಸದ ತೇಜಸ್ವಿ ಸೂರ್ಯ ದಿಕ್ಸೂಚಿ ಭಾಷಣ ಮಾಡಿದರು. ಡಾ. ಮೋಹನ ಆಳ್ವ, ಎಂ.ಕೆ.ಭಟ್, ಮಿಮಿಕ್ರಿ ದಯಾನಂದ್, ದತ್ತಾತ್ರೇಯ ವೇಲಂಕರ್ ಮತ್ತಿತರರು ಪಾಲ್ಗೊಂಡಿದ್ದರು.
ಕೃಷಿಯಲ್ಲಿ ತಂತ್ರಜ್ಞಾನದ ಅಳವಡಿಕೆ, ಆಡಳಿತಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು, ಸ್ವ ಉದ್ಯಮದಿಂದ ಉದ್ಯೋಗಾವಕಾಶ ಎಂಬ ವಿಷಯಗಳ ಕುರಿತು ಚಿಂತನಗೋಷ್ಠಿಗಳು ನಡೆದವು. ಕೃಷಿ ಗೋಷ್ಠಿಯಲ್ಲಿ ಶಿವಾನಂದ ಕಳವೆ, ಡಾ. ಮೋಹನ ತಲಕಾಲಕೊಪ್ಪ, ಡಾ.ವೆಂಕಟ್ರಮಣ ಹೆಗಡೆ, ಪ್ರಗತಿಪರ ಕೃಷಿಕ ಬೆಳ್ತಂಗಡಿಯ ಅನಿಲ ಬಳಂಜ ವಿಷಯ ಮಂಡಿಸಿದರು. ಆಡಳಿತಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗೋಷ್ಠಿಯಲ್ಲಿ ಸುಕನ್ಯಾ ಸಂತ್, ಎಸ್.ಎಂ.ಹೆಗಡೆ, ಐಪಿಎಸ್ ಅಧಿಕಾರಿ ಟಿ.ಕೃಷ್ಣ ಭಟ್, ಸಹನಾ ಬಾಳ್ಕಲ್, ಶಶಿಭೂಷಣ ಹೆಗಡೆ ಪಾಲ್ಗೊಂಡಿದ್ದರು. ಉದ್ಯಮ ಗೋಷ್ಠಿಯಲ್ಲಿ ಸುಧಾ ಶರ್ಮ ಚವತ್ತಿ, ಕೇಶವ ಪ್ರಸಾದ ಮುಳಿಯ, ಮಂಜುನಾಥ ಸುವರ್ಣಗದ್ದೆ, ನಾರಾಯಣ ಯಾಜಿ ಪಾಲ್ಗೊಂಡು ಮಾತನಾಡಿದರು.
ಹವ್ಯಕ ಸಮ್ಮೇಳನದಲ್ಲಿ ಪ್ರಮುಖ ಆಕರ್ಷಣೆಯಾಗಿ ಆಲೆಮನೆ ಎಲ್ಲರ ಗಮನಸೆಳೆಯಿತು. ಪಾರಂಪರಿಕ ಕೋಣಗಳಿಂದ ಚಲಿಸುವ ಕಣೆ (ಕಬ್ಬು ಅರೆಯುವ ಯಂತ್ರ) ಮೂಲಕ ಕಬ್ಬಿನ ಹಾಲು ತೆಗೆದು ಅಲ್ಲಿಯೇ ಬೆಲ್ಲವನ್ನು ತಯಾರಿಸಿ ಮಾರಾಟಕ್ಕೆ ಇಡಲಾಗಿತ್ತು. ಬಿಸಿ ಬಿಸಿ ಬೆಲ್ಲದ ಘಮಲು ಸಮ್ಮೇಳನಕ್ಕೆ ಬಂದವರ ಬಾಯಲ್ಲಿ ನೀರು ತರಿಸುತ್ತಿತ್ತು. ಆಲೆಮನೆಯ ಎದುರಿಗೆ ಪ್ರದರ್ಶನಕ್ಕಿರಿರಸಲಾಗಿದ್ದ ದೇಸಿ ತಳಿಯ 20ಕ್ಕೂ ಹೆಚ್ಚಿನ ಗೋವುಗಳು ನಗರವಾಸಿಗಳ ಗಮನ ಸೆಳೆಯಿತು. ಬಂದವರಿಗೆಲ್ಲರಿಗೂ ಹವ್ಯಕ ಶೈಲಿಯ ವಿಶೇಷ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು. ಸಾರ್ವಜನಿಕರು ವಿವಿಧ ಪ್ರದರ್ಶನ ಮತ್ತು ಮಾರಾಟ ಮಳಿಗೆಯತ್ತ ಹೆಚ್ಚು ಆಕರ್ಷಿತರಾಗಿದ್ದರು. ಹವ್ಯಕ ಶೈಲಿಯ ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ವಿವಿಧ ತಿಂಡಿ, ತಿನಿಸುಗಳ ಖರೀದಿ ಭರಾಟೆ ಜೋರಾಗಿತ್ತು.
ಹವ್ಯಕ ಯುವಕರು ಮಾಡಿದ ವಿವಿಧ ಪ್ರಯೋಗ, ಸಂಶೋಧನೆಗಳಿಂದ ಅಡಿಕೆಗೆ ಬೆಲೆ ಬಂದಿದೆ ಎಂದು ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಹೇಳಿದ್ದಾರೆ. ಅಡಿಕೆ ಬಗ್ಗೆ ತಪ್ಪು ಕಲ್ಪನೆ ಇದೆ. ಉತ್ತರ ಭಾರತೀಯರು ಗುಟ್ಕಾವನ್ನೇ ಅಡಿಕೆ ಎಂದು ಭಾವಿಸಿದ್ದಾರೆ. ಗುಟ್ಕಾದಲ್ಲಿ ಕೆಮಿಕಲ್ ಇರುತ್ತದೆ. ಅದನ್ನು ಪರೀಕ್ಷೆ ಮಾಡಿದಾಗ ವಿಷಕಾರಿ ಅಂಶ ಎಂದು ಲಿತಾಂಶ ಬರುತ್ತದೆ. ಈ ಬಗ್ಗೆ ಪ್ರಕರಣ ನ್ಯಾಯಾಲಯದಲ್ಲಿದ್ದು, ಅಡಿಕೆ ಪರವಾಗಿ ವಾದ ಮಂಡಿಸಲು ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದಾರೆ. ಆ ಮೂಲಕ ಅತಿಹೆಚ್ಚು ಅಡಿಕೆ ಬೆಳೆಯುವ ಹವ್ಯಕರ ಪರವಾಗಿ ಕೇಂದ್ರ ಸರ್ಕಾರ ನಿಂತಿದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.
ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ವಿಶ್ವ ಹವ್ಯಕ ಸಮ್ಮೇಳನಕ್ಕೆ ಭಾನುವಾರ ತೆರೆ ಬೀಳಲಿದೆ. ಬೆಳಗ್ಗೆ ಸಹಸ್ರ ಕಂಠದಲ್ಲಿ ಭಗವದ್ಗೀತೆ ಪಠಣ ನಂತರ 81 ಯೋಧರಿಗೆ ಸನ್ಮಾನ ಆ ನಂತರ ಸೋಂದೆ ಸ್ವರ್ಣವಲ್ಲಿ ಮಠದ ಉಭಯ ಶ್ರೀಗಳ ಸಾನ್ನಿಧ್ಯದಲ್ಲಿ ಸಹಸ್ರಚಂದ್ರ ಸಭಾ ಕಾರ್ಯಕ್ರಮ ನಡೆಯಲಿದೆ.ಮಧ್ಯಾಹ್ನ 81 ಸಾಧಕರಿಗೆ ಸ್ಫೂರ್ತಿರತ್ನ ಪ್ರಶಸ್ತಿ ಪ್ರದಾನ ನಡೆಯಲಿದ್ದು ನಂತರ ನಡೆಯುವ ಸಮಾರೋಪ ಸಮಾರಂಭದಲ್ಲಿ ರಾಮಚಂದ್ರಾಪುರ ಶ್ರೀಗಳು, ಹರಿಹರ ಪಂಚಮಸಾಲಿ ಶ್ರೀಗಳು, ಕಾಂಚಿ ಕಾಮಕೋಟಿ, ಕೂಡಲಿ ಶೃಂಗೇರಿ ಶ್ರೀಗಳು ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ.