ಮಹಾತ್ಮನ ಕನಸು ನನಸಾಗಿಲ್ಲ

MLK KANOONU 30
Published on

ಮೊಳಕಾಲ್ಮೂರು: ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಕನಸು ನನಸಾಗಿಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ಸಿವಿಲ್ ನ್ಯಾಯಾಧೀಶೆ ಎಸ್. ನಿರ್ಮಲಾ ಹೇಳಿದರು.

ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದಿಂದ ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ ಅಂಗವಾಗಿ ಇಲ್ಲಿನ ಕೇಂದ್ರೀಯ ಆದರ್ಶ ವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಹಿಂಸಾ ಪದ್ಧತಿಯಿಂದ ದೇಶಕ್ಕೆ ಸ್ವಾತಂತ್ರೃ ತಂದುಕೊಟ್ಟ ಮಹಾತ್ಮನ ಕನಸು ಕನಸಾಗಿಯೇ ಉಳಿದಿದೆ. ಇದರ ಸಾಕಾರಕ್ಕೆ ವಿದ್ಯಾರ್ಥಿಗಳು ಸಂಕಲ್ಪ ಮಾಡಬೇಕು. ಅಸಮಾನತೆ ಅಳಿಸಿ ಎಲ್ಲೆಡೆ ಸಮಾನತೆ ಮೂಡುವಂತೆ ಮಾಡಬೇಕು. ಸ್ವಚ್ಛ, ಸುಂದರ, ಭ್ರಷ್ಟಾಚಾರಮುಕ್ತ ಸಮಾಜ ಕಟ್ಟಲು ಕಂಕಣಬದ್ಧರಾಗಬೇಕು ಎಂದು ಮನವಿ ಮಾಡಿದರು.

ವಕೀಲ ಕೆ.ಎಂ.ರಾಮಾಂಜನೇಯ ಮಾತಾನಾಡಿ, ಎಲ್ಲರಲ್ಲೂ ಸ್ವಚ್ಛತಾ ಮನೋಭಾವ ಮೂಡದ ಹೊರತು ಸ್ವಚ್ಛ ಭಾರತ ಅಭಿಯಾನ ಪೂರ್ಣಗೊಳ್ಳದು. ಪ್ರತಿಯೊಬ್ಬರೂ ವೈಯಕ್ತಿಕ ಸ್ವಚ್ಛತೆಯಿಂದ, ಮನೆ, ಮಂದಿರ, ಕಚೇರಿ, ಸಾರ್ವಜನಿಕ ಸ್ಥಳಗಳ ಶುಚಿತ್ವದೆಡೆಗೆ ಗಮನ ಹರಿಸಬೇಕು ಎಂದು ತಿಳಿಸಿದರು.

ವಕೀಲರ ಸಂಘದ ಅಧ್ಯಕ್ಷ ಪಿ.ಪಾಪಯ್ಯ, ಕಾರ್ಯದರ್ಶಿ ಜಿ.ಮಂಜುನಾಥ್, ಮುಖ್ಯಶಿಕ್ಷಕಿ ಸುಚಿತ್ರಾ, ವಕೀಲರಾದ ಅನಂತಮೂರ್ತಿ, ಎ.ತಿಮ್ಮಪ್ಪ, ವೀರೇಶ್, ಯರ‌್ರಿಸ್ವಾಮಿ, ಸಿದ್ದಪ್ಪ, ಎಂ.ಎನ್.ವಿಜಯಲಕ್ಷ್ಮಿ, ರಾಘವೇಂದ್ರ, ಶಿಕ್ಷಕರಾದ ಎಲ್.ಕೆ.ದೇವರಾಜ್, ಎಸ್.ಕೆ.ವಿಜಯ್, ಎಂ.ಸಣ್ಣಗಿಡ್ಡಯ್ಯ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net