

ಮೊಳಕಾಲ್ಮೂರು: ಪಟ್ಟಣದಲ್ಲಿ ಸ್ವಚ್ಛತೆ ಸೇರಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಪಟ್ಟಣ ಪಂಚಾಯಿತಿ ಆಡಳಿತ ಮುಂದಾಗಿದ್ದು, ಪಾಳು ಬಿದ್ದಿದ್ದ ಐದು ಸಾರ್ವಜನಿಕ ಶೌಚಗೃಹಗಳ ದುರಸ್ತಿಗೆ ಕ್ರಮ ಕೈಗೊಂಡಿದೆ.
2009-10ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ಸಣ್ಣ-ಮಧ್ಯಮ ಪಟ್ಟಣಾಭಿವೃದ್ಧಿ ಯೋಜನೆಯಡಿ ತಲಾ 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಐದು ಶೌಚಗೃಹ ವಿದ್ಯುತ್, ನೀರಿನ ಸೌಲಭ್ಯವಿಲ್ಲದೆ ಪಾಳು ಬಿದ್ದಿದ್ದವು. 10 ಲಕ್ಷ ರೂ. ಮೀಸಲಿಟ್ಟು ಇವುಗಳ ದುರಸ್ತಿಗೆ ಪಪಂ ಮುಂದಾಗಿದೆ.
ಇದಲ್ಲದೇ ತಾಲೂಕು ಕಚೇರಿ ಆವರಣ, ಕೆಇಬಿ ವೃತ್ತ, ಕೋಟೆ ಬಡಾವಣೆಯಲ್ಲಿ ಸಾರ್ವಜನಿಕ ಶೌಚಗೃಹಗಳ ನಿರ್ಮಾಣಕ್ಕೆ ಸಂಸದರಿಗೆ ಮನವಿ ಮಾಡಲಾಗಿದೆ. ಒಣ, ಹಸಿ ಕಸ ಪ್ರತ್ಯೇಕಿಸಿ ಕಸದ ವಾಹನದಲ್ಲಿ ಹಾಕಲು ಅರಿವು ಮೂಡಿಸಲಾಗುತ್ತಿದೆ. ಖಾಲಿ ನಿವೇಶನಗಳಲ್ಲಿ ಬೆಳೆದ ಜಾಲಿಗಿಡ ತೆರವಿಗೆ ಸೂಚಿಸಲಾಗಿದೆ.
ತುಂಗಭದ್ರ ಹಿನ್ನೀರು ಯೋಜನೆಯಡಿ ಪೈಪ್‌ಲೈನ್ ಅವಳವಡಿಸುತ್ತಿದ್ದು, ನೀರಿನ ಸಂಗ್ರಹಣೆಗೆ ಹಳೆಯ ಮೂರು ಟ್ಯಾಂಕ್‌ಗಳ ಜತೆಗೆ ಮಾರುತಿ ಬಡಾವಣೆಯಲ್ಲಿ 75 ಲಕ್ಷ ರೂ. ವೆಚ್ಚದಲ್ಲಿ 2 ಲಕ್ಷ ಲೀಟರ್ ಸಾಮರ್ಥ್ಯದ ಇನ್ನೊಂದು ದೊಡ್ಡ ಟ್ಯಾಂಕ್ ನಿರ್ಮಿಸಲು ಯೋಚಿಸಲಾಗಿದೆ.
ಮುಖ್ಯಾಧಿಕಾರಿ ಎಚ್.ಕಾಂತರಾಜ್ ಹೇಳಿಕೆ: ಪಟ್ಟಣದಲ್ಲಿ ನೈರ್ಮಲ್ಯ ಕಾಪಾಡಲು ಆದ್ಯತೆ ನೀಡಲಾಗುವುದು. ಆರು ಆರ್‌ಒ ಘಟಕಗಳನ್ನು ರಿಪೇರಿ ಮಾಡಿಸಿ ಶುದ್ಧ ನೀರು ಪೂರೈಸಲಾಗುತ್ತಿದೆ. ಉಳಿದ ಎರಡು ಕಡೆ ಶೀಘ್ರವೇ ಆರ್‌ಒ ಘಟಕಗಳನ್ನು ದುರಸ್ತಿಗೊಳಿಸಲಾಗುವುದು.