ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನಕ್ಕೆ ಜೀವಕಳೆ

MLK SALU MARA (3)
Published on

ಕೆ.ಕೆಂಚಪ್ಪ ಮೊಳಕಾಲ್ಮೂರು: ಮೊಳಕಾಲ್ಮೂರಿನ ಸಾಲುಮರದ ತಿಮ್ಮಕ್ಕ ಉದ್ಯಾನವು ಸಾರ್ವಜನಿಕರನ್ನು ಆಹ್ವಾನಿಸಲು ಸಿದ್ಧವಾಗಿದೆ.

ಲಾಕ್‌ಡೌನ್‌ನಿಂದಾಗಿ ತಾಲೂಕಿನ ಪ್ರವಾಸಿ ತಾಣಗಳು ಬಂದಾಗಿದ್ದವು. ಇದರಿಂದ ಜನರು, ಮಕ್ಕಳು, ವಯೋವೃದ್ಧರು, ಪ್ರವಾಸಿಗರು ಮನೆಯಲ್ಲೇ ಕಾಲ ಕಳೆಯುವಂತಾಗಿತ್ತು. ವಿಶ್ರಾಂತಿ, ಪ್ರವಾಸಕ್ಕೆಂದು ಎಲ್ಲೂ ಹೋಗವುದು ನಿಷಿದ್ಧವಾಗಿತ್ತು.

ಈಗ ಹಂತ ಹಂತವಾಗಿ ಲಾಕ್‌ಡೌನ್ ತೆರವುಗೊಳ್ಳುತ್ತಾ ಬಂದಿದ್ದು, ಎಲ್ಲವೂ ಹಿಂದಿನಂತೆ ಸಹಜ ಸ್ಥಿತಿಯತ್ತ ಮರಳುತ್ತಿದೆ. ಮುಂಗಾರು ಆರಂಭದ ಕಾಲವಾದ್ದರಿಂದ ಉದ್ಯಾನಗಳು, ಪ್ರವಾಸಿ ತಾಣಗಳು ಹಸಿರಿನಿಂದ ಕಂಗೊಳಿಸುತ್ತಿವೆ.

ಸಾರ್ವಜನಿಕರನ್ನು ಆಕರ್ಷಿಸಲು ಸಿದ್ಧವಾಗಿವೆ. ಮೊಳಕಾಲ್ಮೂರಿನ ಏಕೈಕ ಉದ್ಯಾನವಾದ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವು ಇದಕ್ಕೆ ಹೊರತಾಗಿಲ್ಲ. ಎಂದಿನಂತೆ ಜನರಿಗೆ ಶಾಂತಿ, ನೆಮ್ಮದಿ, ಮಕ್ಕಳ ಆಟೋಟಗಳು ನಡೆಯಲಿವೆ.

ಹನ್ನೊಂದು ಎಕರೆ ವಿಸ್ತೀರ್ಣದ ಸಸ್ಯಕ್ಷೇತ್ರದಲ್ಲಿ ಮಕ್ಕಳ ಆಟಿಕೆಗಳು, ಜೋಕಾಲಿ, ಏಣಿಯಾಟ, ವಿಶ್ರಾಂತಿ ಕುಟೀರ, ವಿಶಾಲವಾದ ಮೈದಾನ, ನೂರಾರು ವರ್ಷ ತುಂಬಿದ ಸಾಲುಮರಗಳ ನೆರಳು ಶಾಂತಿ, ನೆಮ್ಮದಿ ನೀಡುತ್ತವೆ. ಮನಸು ಪ್ರಫುಲ್ಲಗೊಳಿಸುತ್ತವೆ.

ಸರ್ಕಾರಿ ರಜಾ ದಿನ ಅಥವಾ ಹಬ್ಬ ಹರಿದಿನಗಳಲ್ಲಂತು ಉದ್ಯಾನದಲ್ಲಿ ಜನರಿಂದ ತುಂಬಿರುತ್ತದೆ. ಲಾಕ್‌ಡೌನ್ ಯಾವಾಗ ಸಂಪೂರ್ಣ ತೆರವುಗೊಳ್ಳುತ್ತದೊ, ಪಾರ್ಕ್ ಯಾವಾಗ ತೆರೆಯುತ್ತದೊ ಎಂದು ಸಾರ್ವಜನಿಕರು ಕಾತರದಿಂದ ಕಾಯುತ್ತಿದ್ದಾರೆ.

40 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ: ಅರಣ್ಯ ಇಲಾಖೆಯಿಂದ ಅಂದಾಜು 40 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಂಡಿರುವ ಉದ್ಯಾನಕ್ಕೆ 2018ರ ಸೆ. 5 ಶಿಕ್ಷಕರ ದಿನಂದಂದು ಸಚಿವ ಶ್ರೀರಾಮುಲು ಚಾಲನೆ ಕೊಟ್ಟಿದ್ದರು. ಅಂದಿನಿಂದ ಅದರ ನಿರ್ವಹಣೆಗೆಂದು ಪ್ರವೇಶ ಶುಲ್ಕ ನಿಗದಿ ಮಾಡಲಾಗಿತ್ತು. ಆರಂಭದಲ್ಲಿ ತಿಂಗಳಿಗೆ ನಾಲ್ಕೈದು ಸಾವಿರ ರೂ. ತನಕ ಸಂಗ್ರಹವಾಗುತ್ತಿತ್ತು. ನಂತರ 3 ಸಾವಿರ ರೂ. ವರೆಗೆ ಆದಾಯ ಬರುತ್ತಿದೆ.

ವಿರೂಪಾಕ್ಷಪ್ಪ ಪರಿಸರಪ್ರೇಮಿ

ಬಯಲುಸೀಮೆ ಪ್ರದೇಶದಲ್ಲಿ ವಿಪರೀತ ಉಷ್ಣಾಂಶಕ್ಕೆ ಜನ ಬೇಸತ್ತಿದ್ದಾರೆ. ಮನೆಯಲ್ಲಿ ಹಗಲಿರುಳು ಫ್ಯಾನ್ ಹಾಕಿದರೂ ಬಿಸಿಲಿನ ಧಗೆ ತಡೆಯಲಾಗುತ್ತಿಲ್ಲ. ಹೀಗಿದ್ದರೂ ಪಟ್ಟಣ ಪಂಚಾಯಿತಿ ಉದ್ಯಾನಕ್ಕೆ ಆದ್ಯತೆ ಕೊಡದ ಕಾರಣ ಟೌನ್‌ನಲ್ಲಿರುವ ಮೂರ‌್ನಾಲು ಪಾರ್ಕ್‌ಗಳು ಅಗತ್ಯ ಸೌಕರ್ಯಗಳ ಕೊರತೆಯಿಂದ ಸೊರಗುತ್ತಿವೆ. ಇವುಗಳ ಅಭಿವೃದ್ಧಿಗೆ ಗಮನ ಹರಿಸಬೇಕಿದೆ.

ಡಾ.ಮಂಜುನಾಥ್ ಸಾರ್ವಜನಿಕ

ಪಟ್ಟಣ ಸೌಂದರ್ಯವಾಗಿರಬೇಕೆಂದರೆ ಸ್ವಚ್ಛತೆ, ವಿಶಾಲವಾದ ರಸ್ತೆ, ಪಾರ್ಕ್‌ಗಳು, ಪ್ರತಿ ಬಡಾವಣೆ ರಸ್ತೆ ಬದಿ ಸಾಲು ಮರಗಳು, ಮನೆಯ ಆವರಣದಲ್ಲಿ ಸಸ್ಯ ಸಂಪತ್ತು ಅಗತ್ಯ. ಇವುಗಳನ್ನು ಬೆಳೆಸಿ, ಪೋಷಿಸುವ ಔದಾರ್ಯತೆ, ಕಾಳಜಿಯನ್ನು ಎಲ್ಲರೂ ಸ್ವ ಇಚ್ಛೆಯಿಂದ ತೆಗೆದುಕೊಳ್ಳಬೇಕು. ಇದಕ್ಕೆ ಪೂರಕವಾಗಿ ಪಪಂ ಆಡಳಿತ ಜನ ಜಾಗೃತಿಗೆ ಒತ್ತುಕೊಡಬೇಕಿದೆ.

ಮಕ್ಕಳ ಬುದ್ಧಿಶಕ್ತಿ ವಿಕಾಸಕ್ಕೆ ವೈಜ್ಞಾನಿಕ ಚಿಂತನೆ, ಪರಿಸರ ಸಂರಕ್ಷಣೆ, ಕಾಳಜಿ, ವಿಜ್ಞಾನದ ಹೊಸ ಅವಿಷ್ಕಾರಗಳ ಚಿತ್ರಪಟಗಳು, ವಿವಿಧ ಗಿಡಮೂಲಿಕೆಗಳು, ಪ್ರಾಣಿ ಪಕ್ಷಿಗಳ ಪರಿಚಯಕ್ಕಾಗಿ ಉದ್ಯಾನದಲ್ಲಿ ಪ್ರತ್ಯೇಕ ಮಾದರಿ ಪ್ರಯೋಗಾಲಯ ಸ್ಥಾಪನೆ ಮಾಡುವ ಗುರಿ ಇದೆ. ಸರ್ಕಾರ ಮತ್ತು ಇಲಾಖೆಗೆ ಪತ್ರ ಬರೆಯಲಾಗುವುದು.
ನಾಗೇಂದ್ರನಾಯಕ
ಅರಣ್ಯಾಧಿಕಾರಿ, ಮೊಳಕಾಲ್ಮೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net