

ಮೊಳಕಾಲ್ಮೂರು: ತಾಲೂಕಿನ ಜನರ ಆರೋಗ್ಯ ದೃಷ್ಟಿಯಿಂದ ಆಯುರ್ವೇದಿಕ್ ಹಾಗೂ ಹೋಮಿಯೋಪಥಿ ಸರ್ಕಾರಿ ಆಸ್ಪತ್ರೆ ಮಂಜೂರಾತಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಭರವಸೆ ನೀಡಿದರು.
ಇಲ್ಲಿನ ತಾಪಂ ಸಭಾಂಗಣದಲ್ಲಿ ಮಂಗಳವಾರ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾರ್ವಜನಿಕ ಆಸ್ಪತ್ರೆಗಳಿಗೆ ಅತ್ಯಾಧುನಿಕ ಸಲಕರಣೆ, ಅಗತ್ಯ ಸಿಬ್ಬಂದಿ ನೇಮಕ, ಹೆದ್ದಾರಿಗಳಲ್ಲಿ ಅಪಘಾತಕ್ಕೀಡಾದವರಿಗೆ ತುರ್ತು ಆಂಬುಲೆನ್ಸ್ ವ್ಯವಸ್ಥೆ, ಟ್ರಾಮಾ ಸೆಂಟರ್ ಸ್ಥಾಪನೆ ಕುರಿತು ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದರು.
ತಾಲೂಕಿನಲ್ಲಿ 75 ಶುದ್ಧ ಕುಡಿವ ನೀರಿನ ಘಟಕಗಳಿದ್ದು, ಇದರಲ್ಲಿ 25 ದುರಸ್ತಿಯಲ್ಲಿವೆ. ಇವುಗಳ ನಿರ್ವಹಣೆ ಜವಾಬ್ದಾರಿ ಹೊತ್ತ ಏಜೆನ್ಸಿಯವರು ಸರಿಪಡಿಸುತ್ತಿಲ್ಲ ಎಂದು ಇಂಜಿನಿಯರ್ ಪವನ್ ದೂರಿದರು.
ವಿವಿಧ ಇಲಾಖೆ ಅಧಿಕಾರಿಗಳು ಪ್ರಗತಿ ವರದಿ ಮಂಡಿಸಿದರು. ಸ್ಥಾಯಿಸಮಿತಿ ಅಧ್ಯಕ್ಷ ವೀರೇಶ್, ತಹಸೀಲ್ದಾರ್ ಎಂ. ಬಸವರಾಜ್, ಆಪ್ತ ಸಹಾಯಕರಾದ ಪಾಪೇಶ್, ಹನುಮಂತಪ್ಪ, ಕುಮಾರ್ ಇತರರಿದ್ದರು.