

ಮೊಳಕಾಲ್ಮೂರು: ತಾಲೂಕಿನ ಓಬಳಾಪುರದಲ್ಲಿ ಬುಧವಾರ 20 ಟ್ರ್ಯಾಕ್ಟ್‌ರ್ ಲೋಡ್‌ನಷ್ಟು ಸಾಲು ಬಣವೆಗಳು ಆಕಸ್ಮಿಕ ಬೆಂಕಿಗೆ ಭಸ್ಮವಾಗಿವೆ.
ಗ್ರಾಮದ ರೈತರಾದ ಕಾಡಪ್ಪ, ಲಕ್ಷ್ಮಣ, ಬಸಪ್ಪ, ಸಿದ್ದಣ್ಣ ಇವರಿಗೆ ಸೇರಿದ 12 ಲೋಡ್ ಶೇಂಗಾ ಹೊಟ್ಟು, 6 ಲೋಡ್ ಜೋಳದ ಸೊಪ್ಪೆ, 2 ಲೋಡ್ ಭತ್ತದ ಹುಲ್ಲು ಹಾಗೂ 80 ಸರ್ವೆ ಪೋಲ್ಸ್ ಸುಟ್ಟು ಕರಕಲಾಗಿವೆ.
ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಸತತ ಪ್ರಯತ್ನಪಟ್ಟರು ಬೆಂಕಿ ಜ್ವಾಲೆ ಹೆಚ್ಚಾಯಿತೇ ಹೊರತು ನಂದಲಿಲ್ಲ. ಇದೇ ವೇಳೆ ಅಗ್ನಿ ನಂದಕ ವಾಹನದಲ್ಲಿನ ನೀರು ಕಾಲಿಯಾಗಿ ಮತ್ತಷ್ಟು ಆತಂಕ ಸೃಷ್ಟಿಸಿತು.
ಈ ವೇಳೆ ಎಚ್ಚೆತ್ತುಕೊಂಡ ಅಗ್ನಿ ಶಾಮಕ ಅಧಿಕಾರಿ ಜಿ.ಸುಬಾನ್ ಸಾಬ್, ತಕ್ಷಣ ಸ್ಥಳೀಯರ ಸಹಕಾರ ಪಡೆದು ಜೆಸಿಬಿಯಿಂದ ಗುಂಡಿ ತೋಡಿಸಿ ಅದರಲ್ಲಿ ಏಳೆಂಟು ಟ್ಯಾಂಕರ್ ನೀರು ಸಂಗ್ರಹಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ.
ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಅಗ್ನಿ ಶಾಮಕ ಸಿಬ್ಬಂದಿಗಳಾದ ಆರ್. ಪ್ರಸಾದ್, ಪಸಿವುದ್ದೀನ್, ಮಲ್ಲಿಕಾರ್ಜುನಪ್ಪ, ಶಿವಕುಮಾರ್, ಸೈಯದ್ ಸಕ್ಲೇನ್ ಪಾಲ್ಗೊಂಡಿದ್ದರು.