ಗ್ರಾಮ ಮಟ್ಟದಲ್ಲೇ ಶೇಂಗಾ ಬೀಜ ವಿತರಿಸಿ

MLK janaspandana.. mar... 8
Published on

ಮೊಳಕಾಲ್ಮೂರು: ರೈತ ಸಂಪರ್ಕ ಕೇಂದ್ರದವರು ಗ್ರಾಮ ಮಟ್ಟದಲ್ಲೇ ಶೇಂಗಾ ಬಿತ್ತನೆ ಬೀಜ ವಿತರಿಸುವ ವ್ಯವಸ್ಥೆ ಮಾಡಬೇಕೆಂದು ರೈತರು ಒತ್ತಾಯಿಸಿದರು.

ತಾಲೂಕಿನ ಸಂತೇಗುಡ್ಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಜನಸ್ಪಂದನ ಸಭೆಯಲ್ಲಿ ಕೃಷಿಕರು ಹಕ್ಕೋತ್ತಾಯ ಮಂಡಿಸಿದರು.

ಸಂತೇಗುಡ್ಡ, ಬಾಂಡ್ರಾವಿ, ಹನುಮನಗುಡ್ಡ, ಹನುಮಾಪುರ, ಕೆಳಗಳಕಣಿವೆ, ಮೇಗಳಕಣಿವೆ ಗ್ರಾಮಗಳ 2 ಸಾವಿರಕ್ಕೂ ಅಧಿಕ ರೈತರು 5 ಸಾವಿರ ಎಕರೆಯಲ್ಲಿ ಮುಂಗಾರು ಬೆಳೆಯಾಗಿ ಶೇಂಗಾ ಬಿತ್ತನೆ ಮಾಡುವ ವಾಡಿಕೆ ಇದೆ. ಬಿತ್ತನೆ ಬೀಜ ಖರೀದಿಸಲು ದೂರದ ರಾಂಪುರ ರೈತಸಂಪರ್ಕ ಕೇಂದ್ರಕ್ಕೆ ಹೋಗಬೇಕು. ಇಲ್ಲಿ ಸಾರಿಗೆ ವ್ಯವಸ್ಥೆ ಇಲ್ಲದೆ ಖಾಸಗಿ ವಾಹನಗಳ ಮೊರ ಹೋಗಬೇಕಿದೆ. ಹೀಗಾಗಿ ಸಂತೇಗುಡ್ಡ ಗ್ರಾಪಂ ಮಟ್ಟದಲ್ಲೇ ಬಿತ್ತನೆ ಬೀಜ ವಿತರಣೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪ್ರತಿಕ್ರಿಯಿಸಿದ ತಹಸೀಲ್ದಾರ್ ಎಂ.ಬಾಸವರಾಜ್, ಬಿತ್ತನೆ ಬೀಜದ ಬೇಡಿಕೆ ಮತ್ತು ಸೂಕ್ತ ಜಾಗದಲ್ಲಿ ದಾಸ್ತಾನು ವ್ಯವಸ್ಥೆ ಕುರಿತು ಕೃಷಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸಕಾಲಕ್ಕೆ ಬಿತ್ತನೆ ಬೀಜ ವಿತರಣೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ರಾಂಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಸಣ್ಣ ಕಾಯಿಲೆಗೂ ಔಷಧ ತರಲು ಹೊರಗಡೆಗೆ ಚೀಟಿ ಬರೆದುಕೊಡುತ್ತಾರೆ. ಈ ಬಗ್ಗೆ ಕೇಳಿದರೆ ಮೆಡಿಸಿನ್ ಇಲ್ಲ ಎಂಬ ಸಬೂಬು ಹೇಳುತ್ತಾರೆ ಎಂದು ಗ್ರಾಮಸ್ಥರಾದ ನಾಗರಾಜ್, ರಾಮಣ್ಣ, ಹಿದಾಯತ್ ವುಲ್ಲಾ, ಭೀಮಣ್ಣ ದೂರಿದರು.

ಈ ಭಾಗದ ಹಲವು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ಸಂತೇಗುಡ್ಡ ಶಾಲೆಯ ಮುಖ್ಯಶಿಕ್ಷಕ ಐದಾರು ದಿನದಿಂದ ಗೈರಾಗಿದ್ದರೂ ಕೇಳುವವರೇ ಇಲ್ಲ. ಇಲ್ಲಿನ ಉರ್ದು ಶಾಲೆಯಲ್ಲಿ ಶೌಚಗೃಹ ಇಲ್ಲ ಎಂದು ಗ್ರಾಮಸ್ಥರು ಸಭೆ ಗಮನಕ್ಕೆ ತಂದರು.

ಪ್ರತಿಕ್ರಿಯಿಸಿದ ಇಸಿಒ ಎ.ಷಣ್ಮುಖಪ್ಪ, ಗೈರಾದ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಲು ಬಿಇಒ ಗಮನಕ್ಕೆ ತರಲಾಗುವುದು. ಶೌಚಗೃಹ ಕಟ್ಟಿಸಲು ಸೂಕ್ತ ಕ್ರಮವಹಿಸಲಾಗುವುದು ಎಂದರು.

ತಹಸೀಲ್ದಾರ್ ಎಂ.ಬಸವರಾಜ್ ಮಾತನಾಡಿ, ಅರ್ಹರು ಸಾಮಾಜಿಕ ಭದ್ರತಾ ಯೋಜನೆ ಸೌಲಭ್ಯ ಪಡೆದುಕೊಳ್ಳಬೇಕು. ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ ಸಮಾಜ ಸುಧಾರಣೆ ಸಹಕರಿಸಬೇಕು. ಸ್ವಚ್ಛತೆ, ಆರೋಗ್ಯದೆಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.

ಗ್ರಾಪಂ ಅಧ್ಯಕ್ಷ ಎನ್.ಕುಮಾರಸ್ವಾಮಿ, ಉಪಾಧ್ಯಕ್ಷೆ ಯಶೋದಮ್ಮ, ಸದಸ್ಯರಾದ ಮಾರಕ್ಕ, ಹನುಮಕ್ಕ, ಗೋವಿಂದಪ್ಪ, ರಾಧಮ್ಮ, ಕಲಾವತಿ, ತಿಪ್ಪಮ್ಮ, ಸಿಡಿಪಿಒ ಸವಿತಾ, ಪಿಡಿಒ ಸದಾಶಿವಪ್ಪ, ಕಂದಾಯ ಅಧಿಕಾರಿ ಗೋಪಾಲ್, ಶಿವಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net