ಮೊದಲ ದಿನವೆ 69 ಮಕ್ಕಳು ಗೈರು

MLK POORAKA 17 (2)
Published on

ಮೊಳಕಾಲ್ಮೂರು: ತಾಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ 31 ಶಾಲೆಗಳಲ್ಲಿ ಸೋಮವಾರ ಆರಂಭವಾದ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷ್ಷೆಗೆ ಕೂರಬೇಕಿದ್ದ 2039 ವಿದ್ಯಾರ್ಥಿಗಳ ಪೈಕಿ 69 ಮಕ್ಕಳು ಗೈರಾಗಿರುವುದು ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಶಿಕ್ಷಕರ ನಿದ್ದೆಗೆಡಿಸಿದೆ.

ಈ ಬಾರಿಯ ಫಲಿತಾಂಶ ಸುಧಾರಣೆಗಾಗಿ ಶೈಕ್ಷಣಿಕ ವರ್ಷದ ಆರಂಭದಿಂದಲೂ ವಿಶೇಷ ತರಗತಿ, ಕಿರು ಪರೀಕ್ಷೆ, ನಿರಂತರ ಅಧ್ಯಯನಕ್ಕೆ ಒಳಪಡಿಸಿದ್ದರೂ ಹಲವು ವಿದ್ಯಾರ್ಥಿಗಳು ಗೈರಾಗಿರುವುದು ಶಿಕ್ಷಣ ಇಲಾಖೆಗೆ ಚಿಂತೆಯಾಗಿದೆ.

ಫೆ.18ರಂದು ನಡೆಯುವ ಪರೀಕ್ಷೆಗೆ ಕಡ್ಡಾಯವಾಗಿ ಎಲ್ಲ ಮಕ್ಕಳು ಹಾಜರಿರುವಂತೆ ನೋಡಿಕೊಳ್ಳಲು ಆಯಾ ಶಾಲೆಗಳ ಮುಖ್ಯಶಿಕ್ಷಕರಿಗೆ ಪತ್ರ ಬರೆಯಲಾಗಿದೆ. ಪಾಲಕರನ್ನು ಸಂಪರ್ಕಿಸಿ ಅಥವಾ ತಾವೆ ಖುದ್ದು ಮನೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಮನವೊಲಿಸಿ ಪರೀಕ್ಷೆಗೆ ಹಾಜರಾಗುವಂತೆ ಮಾಡಲು ಸೂಚಿಸಲಾಗಿದೆ. ಒಂದು ವೇಳೆ ಮಕ್ಕಳ ಆರೋಗ್ಯದಲ್ಲಿ ತೊಂದರೆ ಆದರೆ ಸೂಕ್ತ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಸಹ ಕೈಗೊಳ್ಳಲಾಗಿದೆ ಎಂದು ಬಿಇಒ ಎಂ.ಸೋಮಶೇಖರ್ ತಿಳಿಸಿದ್ದಾರೆ.

ನೂರರಷ್ಟು ಹಾಜರಿರುವ ಶಾಲೆಗಳು: ಮೊಳಕಾಲ್ಮೂರಿನ ಮುರಾರ್ಜಿ ದೇಸಾಯಿ ಶಾಲೆ, ಆದರ್ಶ ವಿದ್ಯಾಲಯ, ಸರ್‌ಎಂವಿ ಶಾಲೆ, ಶ್ರೀನಿವಾಸನಾಯಕ ಶಾಲೆ, ಗಟ್ಟೆಪ್ಪನಾಯಕ ಶಾಲೆ, ಸರ್ಕಾರಿ ಪ್ರೌಢಶಾಲೆ ಸಿದ್ದಯ್ಯನಕೋಟೆ, ಕೊಂಡ್ಲಹಳ್ಳಿ ರೇವಣಸಿದ್ದೇಶ್ವರ ಶಾಲೆ, ರಾಂಪುರ ಅರುಣೋದಯ ಶಾಲೆ, ಚಿಕ್ಕೇರಹಳ್ಳಿ ಗುರುರಾಘವೇಂದ್ರ ಶಾಲೆ, ಅಶೋಕ ಸಿದ್ದಾಪುರ ಶಾಲೆ, ರಾಂಪುರ ಮುದುಕೇಶ್ವರ ಶಾಲೆಗಳಲ್ಲಿನ ಎಲ್ಲ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net