

ಮೊಳಕಾಲ್ಮೂರು: ಮಳೆನೀರು ಸಂರಕ್ಷಣೆ ಮೂಲಕ ಸ್ಥಳೀಯ ಕೆರೆಗಳನ್ನು ಸುಸ್ಥಿತಿಯಲ್ಲಿಡಬೇಕು ಎಂದು ಸಣ್ಣ ನೀರಾವರಿ ಇಲಾಖೆ ಜಿಲ್ಲಾ ಮುಖ್ಯ ತಾಂತ್ರಿಕ ಅಧಿಕಾರಿ ಮಲ್ಲಿಕಾರ್ಜುನಯ್ಯ ಹೇಳಿದರು.
ತಾಲೂಕಿನ ಅಮುಕುಂದಿ ಗ್ರಾಮದ ಮಾರಮ್ಮ ದೇವಸ್ಥಾನ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಸ್ಥಳೀಯ ಕೆರೆ ನೀರು ಬಳಕೆದಾರರ ಸಂಘದ ಸಭೆಯಲ್ಲಿ ಮಾತನಾಡಿದರು.
ಕೆರೆಗಳ ಹೂಳೆತ್ತಿಸಿದರೆ ಮಳೆಗಾಲದಲ್ಲಿ ನೀರು ಸಂಗ್ರಹವಾಗಿ ಅಂತರ್ಜಲ ಹೆಚ್ಚುತ್ತದೆ. ಜನ, ಜಾನುವಾರುಗಳಿಗೆ ಕುಡಿವ ನೀರು ದೊರೆಯಲಿದೆ ಎಂದು ತಿಳಿಸಿದರು.
ಸ್ಥಳೀಯ ಕೆರೆಗಳ ಅಭಿವೃದ್ಧಿಗೆ ನೀರು ಬಳಕೆದಾರರ ಸಂಘ ರಚಿಸಿಕೊಂಡರೆ ಸರ್ಕಾರ ಪ್ರತಿ ವರ್ಷ ಕೆರೆ ಏರಿ, ತೂಬು, ಕಾಲುವೆ ದುರಸ್ತಿಗೆ 1 ಲಕ್ಷ ರೂ., ಕೆರೆಗಳ ಹೂಳೆತ್ತಲು 8 ಲಕ್ಷ ರೂ.ವರೆಗೆ ನೆರವು ನೀಡುತ್ತದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯ 166 ಸಣ್ಣ ಕೆರೆಗಳ ಪೈಕಿ 82 ಕೆರೆಗಳ ಅಭಿವೃದ್ಧಿಗೆ ಸಂಘಗಳ ರಚನೆ ಆಗಿದೆ. 26 ಕೆರೆಗಳ ಪುನಶ್ಚೇತನಕ್ಕೆ ಈಗಾಗಲೇ ತಲಾ 1 ಲಕ್ಷ ರೂ. ನೀಡಲಾಗಿದೆ ಎಂದು ತಿಳಿಸಿದರು.
ಸಂಘದ ಜಿಲ್ಲಾ ಉಪಾಧ್ಯಕ್ಷ ಐಯ್ಯಣ್ಣ ಮಾತನಾಡಿ, ಮಾನವನ ದುರಾಸೆಗೆ ಸಮೃದ್ಧವಾಗಿದ್ದ ಕಾಡು ನಾಡಾಗಿ ಪರಿವರ್ತನೆಯಾಗುತ್ತಿದೆ. ಕೆರೆ ಕಟ್ಟೆಗಳ ಜಾಗದಲ್ಲಿ ಬೃಹತ್ ಕಟ್ಟಡ ಕಟ್ಟಲಾಗುತ್ತಿದೆ ಎಂದು ವಿಷಾದಿಸಿದರು.
ನೀರಿಲ್ಲ ಎಂದು ಗಂಟುಮೂಟೆ ಕಟ್ಟಿಕೊಂಡು ಪರ ಊರುಗಳಿಗೆ ಹೋಗುವ ಬದಲು ಇದ್ದೂರನ್ನೇ ಹಸಿರಾಗಿಸಲು ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು.
ಸಣ್ಣ ನೀರಾವರಿ ಇಲಾಖೆ ತಾಂತ್ರಿಕ ಅಧಿಕಾರಿ ಜಗದೀಶ ನಾಯಕ, ಕೆರೆ ನೀರು ಬಳಕೆದಾರರ ಸಂಘದ ಅಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷ ಬೊಮ್ಮಣ್ಣ, ಕಾರ್ಯದರ್ಶಿ ಅಂಜಿನಪ್ಪ, ಖಜಾಂಚಿ ಹಟ್ಟಿ ತಿಪ್ಪೇಸ್ವಾಮಿ ಇತರರಿದ್ದರು.