

ಮೊಳಕಾಲ್ಮೂರು: ಪಟ್ಟಣದಲ್ಲಿ ಮುಖ್ಯ ರಸ್ತೆ ಕಾಮಗಾರಿ ಹಾದಿ ತಪ್ಪಲು ಇಂಜಿನಿಯರ್‌ಗಳೇ ಕಾರಣ. ಇವರಿಗೆ ನಮ್ಮೂರೇ ಬೇಕಿತ್ತಾ ಕೆಡಿಸೋಕೆ? ಎಂದು ಪಪಂ ಅಧ್ಯಕ್ಷ ಟಿ.ರವಿಕುಮಾರ್ ಹಾಗೂ ಪ್ರಗತಿಪರ ಸಂಘಟನೆಗಳ ಮುಖ್ಯಸ್ಥರು ತರಾಟೆಗೆ ತಗೆದುಕೊಂಡರು.
ಇಲ್ಲಿನ ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿ ಮಂಗಳವಾರ, ಪಟ್ಟಣದ ಮುಖ್ಯ ರಸ್ತೆ ಕಾಮಗಾರಿ ಲೋಪ-ದೋಷ ಬಗ್ಗೆ ತಹಸೀಲ್ದಾರ್ ಟಿ.ಸುರೇಶಕುಮಾರ್ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್‌ಗಳ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಈ ಪ್ರಮುಖ ರಸ್ತೆ ಕಾಮಗಾರಿ ನಿರ್ವಹ ಣೆಯಲ್ಲಿ ಗುತ್ತಿಗೆದಾರ ಉದ್ಧಟತನ ತೋರಿದ್ದಾರೆ. ಲೋಪ-ದೋಷಗಳು ಕಣ್ಣೆದುರೇ ಇದ್ದರೂ ಇಂಜಿನಿಯರ್‌ಗಳು ಮೌನ ವಹಿಸಿದ್ದಾರೆ. ಇದರ ಮರ್ಮವೇನು? ಜನದಟ್ಟಣೆ ಪ್ರದೇಶವೆಂಬ ಪರಿಜ್ಞಾನವೂ ಇಲ್ಲದೇ ಕಳಪೆ ಕಾಮಗಾರಿ ಕೈಗೊಂಡಿರುವುದು ಸರಿಯಲ್ಲ. ಪರ್ಯಾಯ ರಸ್ತೆಯೂ ಇಲ್ಲದೇ ತಗ್ಗು, ಗುಂಡಿಗಳಲ್ಲೇ ವಿದ್ಯಾರ್ಥಿಗಳು, ಸಾರ್ವಜನಿಕರು ಜೀವಭಯದಲ್ಲಿ ಸಂಚರಿಸುವಂತಹ ಪರಿಸ್ಥಿತಿ ತಲೆದೋರಿದೆ ಎಂದು ಹರಿಹಾಯ್ದರು.
ಉತ್ತಮವಾಗಿದ್ದ ಪೈಪ್‌ಲೈನ್ ಅನ್ನೂ ಒಡೆದು ಕುಡಿಯುವ ನೀರಿಗೂ ಸಂಚಕಾರ ತಂದಿದ್ದಾರೆ. ಶಾಲೆಗಳ ಬಿಸಿಯೂಟಕ್ಕೆ ಹಾಗೂ ಮನೆಗಳಿಗೆ ಟ್ಯಾಂಕರ್ ನೀರು ಕೊಡುವಂತ ಸ್ಥಿತಿ ಎದುರಾಗಿದೆ. ಗುತ್ತಿಗೆದಾರರನ್ನು ಪ್ರಶ್ನಿಸಿದರೆ ಹಾರಿಕೆ ಉತ್ತರ ಕೊಡುತ್ತಾರೆ ಎಂದು ಕಿಡಿ ಕಾರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಹೆದ್ದಾರಿ ಪ್ರಾಧಿಕಾರದ ಮುಖ್ಯ ಇಂಜಿನಿಯರ್ ರಮೇಶ್, ಬಹು ವರ್ಷಗಳ ಬಳಿಕ ಮುಖ್ಯ ರಸ್ತೆ ಅಭಿವೃದ್ಧಿ ಆಗುತ್ತಿರುವುದು ಒಳ್ಳೆಯ ಬೆಳವಣಿಗೆ. ಗುತ್ತಿದಾರರ ಪರ ವಹಿಸಿ ಮಾತನಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕಾಮಗಾರಿಯಲ್ಲಿ ಆಗಿರುವ ಲೋಪದೊಷ ಸರಿಪಡಿಸಿ ಆಗಬೇಕಾದ ಕೆಲಸಗಳ ಬಗ್ಗೆ ಆದ್ಯತೆ ನೀಡಲಾಗುತ್ತದೆ. ಕಾಮಗಾರಿ ನಿಲ್ಲಿಸುವುದರಿಂದ ಸಮಸ್ಯೆ ಪರಿಹಾರ ಕಾಣುವುದಿಲ್ಲ. ಊರೊಳಗೆ ಹಾಗೂ ರೈತರ ಜಮೀನುಗಳಿಗೆ ನೀರು ನುಗ್ಗದಂತೆ ಆಯ್ದ ಕಡೆ ಒಳ ಚರಂಡಿ, ಪರ್ಯಾಯ ರಸ್ತೆ, ಇತ್ಯಾದಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಎಲ್ಲರ ಸಹಕಾರ ಮುಖ್ಯವೆಂದು ಕೋರಿದರು.
ಸಭೆಯಲ್ಲಿ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್‌ಗಳಾದ ನರೇಂದ್ರ, ವರನಾರಾಯಣ, ಪಪಂ ಅಧ್ಯಕ್ಷ ಟಿ.ರವಿಕುಮಾರ್, ಉಪಾಧ್ಯಕ್ಷ ಮಂಜಣ್ಣ, ಮಾಜಿ ಅಧ್ಯಕ್ಷ ಲಕ್ಷ್ಮಣ, ಮುಖ್ಯಾಧಿಕಾರಿ ಎಚ್.ಕಾಂತರಾಜ್, ಕಸಾಪ ಅಧ್ಯಕ್ಷ ಜಿಂಕಾ ಶ್ರೀನಿವಾಸ, ವಾಂಜ್ರೆ ರಮೇಶ್, ಪ್ರಗತಿಪರ ಸಂಘಟನೆ ಮುಖ್ಯಸ್ಥರಾದ ಬೇಡರಡ್ಡಿಹಳ್ಳಿ ಬಸವರಡ್ಡಿ, ರವಿಕುಮಾರ, ಕೊಂಡಾಪುರ ಪರಮೇಶಿ, ಮಂಜುನಾಥ, ಶಿವಲಿಂಗ, ಚಂದ್ರಣ್ಣ, ನಿಂಗಣ್ಣ, ರಾಜಣ್ಣ, ನಾಗಭೂಷಣ, ನಾಗರಾಜ, ಕೃಷ್ಣಮೂರ್ತಿ ಇದ್ದರು.
ಇಂಜಿನಿಯರ್‌ಗಳೇ ಹೊಣೆ: ಮೊಳಕಾಲ್ಮೂರು ಪಟ್ಟಣದಲ್ಲಿ ವ್ಯವಸ್ಥಿತ ರಸ್ತೆ ಆಗಬೇಕೆಂದು ಊರಿನ ಜನ ಬಯಸಿದ್ದಾರೆ. ಕಾಮಗಾರಿ ಲೋಪ-ದೋಷ ಬಗ್ಗೆ ಗುತ್ತಿಗೆದಾರನಿಗೆ ಅನೇಕ ಬಾರಿ ತಿಳಿಸಿದರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಇಂಜಿನಿಯರ್ ನಿರ್ಲಕ್ಷ್ಯ ಧೋರಣೆ ಖಂಡಿಸಿ ಪ್ರಗತಿಪರ ಸಂಘಟಿಕರು ಒಟ್ಟಾಗಿ ಫೆ.1ರಂದು ರಸ್ತೆ ತಡೆ ಚಳವಳಿ ನಡೆಸುವುದಾಗಿ ಹೇಳಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೂ ತರಲಾಗಿದೆ. ಅವರ ಸೂಚನೆ ಮೇರೆಗೆ ಈ ಸಭೆ ಕರೆದಿದ್ದು, ಲೋಪ ಸರಿಪಡಿಸುವ ಹೊಣೆಗಾರಿಕೆ ಇಂಜಿನಿಯರ್‌ಗಳದ್ದಾಗಿದೆ ಎಂದು ತಹಸೀಲ್ದಾರ್ ಟಿ.ಸುರೇಶ್‌ಕುಮಾರ್ ಸೂಚಿಸಿದರು.