

ಈ ಗ್ರಾಮಗಳಿಗೆ ಈಗಾಗಲೇ ಹಕ್ಕುಪತ್ರ ಹಾಗೂ ಇ-ಸ್ವತ್ತು ದಾಖಲೆಗಳನ್ನು ನೀಡಲಾಗಿದ್ದು, ಎಲ್ಲ ಮೂಲ ಸೌಕರ್ಯಗಳನ್ನು ಕಲ್ಪಿಸಲು ಆದ್ಯತೆ ನೀಡಲಾಗಿದೆ ಎಂದು ತಹಸೀಲ್ದಾರ್ ಟಿ. ಜಗದೀಶ್ ತಿಳಿಸಿದರು. ಈ ಕ್ರಮದಿಂದ ತಾಲೂಕಿನಲ್ಲಿ ಇದುವರೆಗೆ 92 ಇದ್ದ ಜನವಸತಿ ಪ್ರದೇಶಗಳ ಸಂಖ್ಯೆ 107ಕ್ಕೆ ಏರಿಕೆಯಾಗಿದೆ.
ಮತ್ತೆ ಮೂರು ಗ್ರಾಮಗಳಿಗೆ ಪ್ರಸ್ತಾವನೆ
ಉಳಿದಂತೆ, ನೇರ್ಲಹಳ್ಳಿ ಸಮೀಪದ ಎ.ಕೆ. ಕಾಲನಿ, ಚಿಕ್ಕೋಬನಹಳ್ಳಿ ಸಮೀಪದ ವಡ್ಡರಪೆಂಟೆ ಹಾಗೂ ಹಿರೇಕೆರೆಹಳ್ಳಿ ಗ್ರಾ.ಪಂ.ನ ಜಯಂತಿ ನಗರ ಈ ಮೂರು ಉಪ ಗ್ರಾಮಗಳನ್ನೂ ಪರಿಶೀಲನೆ ನಡೆಸಿ ಕಂದಾಯ ಗ್ರಾಮಗಳೆಂದು ಘೋಷಣೆ ಮಾಡಲು ಪ್ರಾಥಮಿಕ ಅಧಿಸೂಚನೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ತಹಸೀಲ್ದಾರ್ ಮಾಹಿತಿ ನೀಡಿದರು.
ಬಡತನ ರೇಖೆಯ ಕುಟುಂಬಗಳಿಗೆ ನೆರವು
ಹೊಸದಾಗಿ ಘೋಷಿಸಿರುವ ಕಂದಾಯ ಗ್ರಾಮಗಳಲ್ಲಿ ಎಸ್ಸಿ, ಎಸ್ಟಿ ಹಾಗೂ ಬಡತನ ರೇಖೆಗಿಂತ ಕೆಳಹಂತದ ಕುಟುಂಬಗಳು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ತೀರಾ ಹಿಂದುಳಿದಿವೆ. ಇವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರ್ಕಾರ ಮತ್ತು ತಾಲೂಕು ಆಡಳಿತವು ಬದ್ಧತೆ ತೋರಬೇಕಿದೆ.
ವಿಶೇಷವಾಗಿ, ಸರ್ಕಾರಿ ಶಾಲೆಗಳಲ್ಲಿ ಕಾಯಂ ಶಿಕ್ಷಕರ ನೇಮಕ, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ತರಗತಿ ಕೊಠಡಿ, ಆಟದ ಮೈದಾನ, ಶುದ್ಧ ಕುಡಿಯುವ ನೀರು, ಶೌಚಗೃಹ ಸೇರಿ ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
"ಸ್ವಾತಂತ್ರ್ಯ ಬಂದಾಗಿನಿಂದಲೂ ಕಂದಾಯ ಗ್ರಾಮಕ್ಕೆ ಒಳಪಡದೆ ದಾಖಲೆ, ಹಕ್ಕುಪತ್ರ ಹಾಗೂ ಮೂಲ ಸೌಕರ್ಯಗಳಿಲ್ಲದೆ ಸೊರಗುತ್ತಿದ್ದ ಮಜುರೆ ಗ್ರಾಮಗಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸರ್ಕಾರ ದೃಢ ನಿರ್ಧಾರ ತೆಗೆದುಕೊಂಡಿದೆ. ಇತ್ತೀಚೆಗೆ ಹೊಸಪೇಟೆಯಲ್ಲಿ ನಡೆದ ಸಮಾವೇಶದಲ್ಲಿ ರಾಜ್ಯದ 1,11,111 ಮಂದಿಗೆ ಹಕ್ಕುಪತ್ರ ನೀಡಲಾಗಿದೆ" ಎಂದು ತಹಸೀಲ್ದಾರ್ ಟಿ. ಜಗದೀಶ್ ತಿಳಿಸಿದರು.