

ಕೆ.ಕೆಂಚಪ್ಪ ಮೊಳಕಾಲ್ಮೂರು: ಸೀರೆಯಷ್ಟೇ ಗುಣಮಟ್ಟದ ಗೂಡು ಉತ್ಪಾದನೆಯಲ್ಲೂ ರಾಜ್ಯದಲ್ಲೇ ಹೆಸರುವಾಸಿಯಾಗಿರುವ ಮೊಳಕಾಲ್ಮೂರು ತಾಲೂಕಿನ ರೇಷ್ಮೆ ಬೆಳೆಗಾರರು ಲಾಕ್‌ಡೌನ್ ಹಿನ್ನೆಲೆಯಲ್ಲಿ ದಿಢೀರ್ ದರ ಕುಸಿತ, ರಾಮನಗರ ಮಾರುಕಟ್ಟೆ ಬಂದ್ ಆಗಿದ್ದರಿಂದ ಅಪಾರ ನಷ್ಟ ಅನುಭವಿಸಿದ್ದಾರೆ.
ತಾಲೂಕಿನ ಮುತ್ತಿಗಾರಹಳ್ಳಿ, ಕೋನಸಾಗರ, ತುಮಕೂರ‌್ಲಹಳ್ಳಿ, ನಾಗಸಮುದ್ರ, ಬಿ.ಜಿ.ಕೆರೆ, ಕೊಂಡ್ಲಹಳ್ಳಿ, ಚಿಕ್ಕುಂತಿ, ಓಬಳಾಪುರ, ಹೊಸಹಳ್ಳಿ ಮತ್ತಿತರ ಗ್ರಾಮಗಳ 320ಕ್ಕೂ ಅಧಿಕ ರೈತರು 280 ಹೆಕ್ಟೇರ್‌ನಲ್ಲಿ ವಿ-1 ತಳಿ ಇಪ್ಪುನೇರಳ ಸೊಪ್ಪು ಬೆಳೆದಿದ್ದಾರೆ. ವಾರ್ಷಿಕ 200 ಟನ್ ರೇಷ್ಮೆ ಗೂಡು ಉತ್ಪಾದನೆ ಆಗುತ್ತಿದ್ದು, ಇದರಿಂದ 80 ಕೋಟಿ ರೂ. ತಾಲೂಕೊಂದರಿಂದಲೇ ಬರುತ್ತಿದೆ.
ತಿಂಗಳಲ್ಲಿ 20 ಟನ್ ಗೂಡು ಉತ್ಪಾದನೆಯಿಂದ ರೈತರು ಪಡೆಯುತ್ತಿದ್ದ ಆರೇಳು ಕೋಟಿ ರೂ. ಆದಾಯಕ್ಕೆ ಕರೊನಾದ ಕಾರ್ಮೋಡ ಕವಿದು ಆದಾಯಕ್ಕೆ ಕೊಕ್ಕೆ ಬಿದ್ದಿದೆ. ಮಾ.23ರಿಂದ ಏಪ್ರಿಲ್ 1ರ ವರೆಗೆ ಹತ್ತು ದಿನಗಳ ಕಾಲ ರಾಮನಗರ ಮಾರುಕಟ್ಟೆ ಬಂದ್ ಮಾಡಿದ್ದರಿಂದ ಈ ಅವಧಿಯಲ್ಲಿ ಬೆಳೆದ ಬರೋಬ್ಬರಿ 8 ಟನ್ ಗೂಡನ್ನು ರೈತರು ತಮ್ಮೂರಿನಲ್ಲೇ 180-200 ರೂ. ಗೆ ಮಧ್ಯವರ್ತಿಗಳಿಗೆ ಮಾರಾಟ ಮಾಡಿ ಲಕ್ಷಾಂತರ ರೂ. ನಷ್ಟ ಅನುಭವಿಸಿದ್ದಾರೆ.
ಹದಿನೈದು ದಿನಗಳ ಕೆಳಗೆ ತಾಲೂಕಿನ ಪ್ರತಿ ಕೆ.ಜಿ. ರೇಷ್ಮೆ ಗೂಡು 610 ರೂ.ಗೆ ಮಾರಾಟವಾಗಿತ್ತು. ಏ.2ರಿಂದ ಮಾರುಕಟ್ಟೆ ಪ್ರಾರಂಭವಾಗಿದ್ದು ಪ್ರಸ್ತುತ ಕೆ.ಜಿ. ಸಿಎಸ್‌ಆರ್ ತಳಿಯ ಗೂಡು 380 ರೂ. ಗೆ ಮಾರಾಟವಾಗುತ್ತಿದೆ. ಅರ್ಧದಷ್ಟು ದರ ಕುಸಿದಿದ್ದರಿಂದ ಕೋಟ್ಯಂತರ ರೂ. ನಷ್ಟವಾಗಿದೆ. ಅಲ್ಲದೆ ರಾಮನಗರಕ್ಕೆ ಗೂಡು ಕೊಂಡೊಯ್ಯಲು ಬಸ್ ವ್ಯವಸ್ಥೆಯಿಲ್ಲದೆ ತೀವ್ರ ಸಮಸ್ಯೆಯಾಗಿದೆ. ಸರ್ಕಾರ ಕೂಡಲೇ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.
ತುಮಕೂರ‌್ಲಹಳ್ಳಿ ರೇಷ್ಮೆ ಬೆಳೆಗಾರ ಬೋರಯ್ಯ ಹೇಳಿಕೆ: ರಾಮನಗರ ಮಾರುಕಟ್ಟೆ ಬಂದ್ ಆಗಿದ್ದಾಗ್ಲೇ ನಮ್ಮ ಬೆಳೆ ಬಂದಿತ್ತು. ನಾಲ್ಕು ಕ್ವಿಂಟಲ್ ಗೂಡನ್ನು ಕೇವಲ 180 ರೂ. ಮಾರಾಟ ಮಾಡಿ 3.50 ಲಕ್ಷ ರೂ. ನಷ್ಟವಾಗಿದೆ. ಸರ್ಕಾರ ಕೂಡಲೇ ನಮ್ಮ ನೆರವಿಗೆ ಬರಬೇಕು.
ಕೊಂಡ್ಲಹಳ್ಳಿ ಎಚ್.ಎನ್.ಮಂಜುನಾಥ ಹೇಳಿಕೆ: 16 ಎಕರೆಯಲ್ಲಿ ಇಪ್ಪುನೇರಳ ಸೊಪ್ಪು ಬೆಳೆದಿದ್ದೇನೆ. ಹತ್ತು ದಿನಗಳ ಕಾಲ ಮಾರುಕಟ್ಟೆ ಬಂದ್ ಆಗಿದ್ದರಿಂದ 630 ಕೆಜಿ ಗೂಡನ್ನು ಕೇವಲ 400 ರೂ. ಮಾರಾಟ ಮಾಡಿ ಅಪಾರ ನಷ್ಟ ಅನುಭವಿಸಿದ್ದೇನೆ.
ರೇಷ್ಮೆ ಇಲಾಖೆ ವಿಸ್ತರಣಾಧಿಕಾರಿ ಏಕಾಂತಪ್ಪ ಹೇಳಿಕೆ: ಉತ್ಪದಾನೆಯಾದ ರೇಷ್ಮೆ ಗೂಡನ್ನು ಹತ್ತು ದಿನದೊಳಗೆ ಮಾರಾಟ ಮಾಡಿದರೆ ರೈತನಿಗೆ ಲಾಭ ದೊರೆಯುತ್ತದೆ. ಸರ್ಕಾರ ಲಾಕ್‌ಡೌನ್ ಹಿನ್ನೆಲೆಯಲ್ಲಿ ಹತ್ತು ದಿನಗಳ ಕಾಲ ಬೆಂಗಳೂರಿನ ರಾಮನಗರ ಮಾರುಕಟ್ಟೆ ಬಂದ್ ಮಾಡಿದ್ದರಿಂದ ಬಹಳಷ್ಟು ರೈತರು ನಷ್ಟ ಅನುಭವಿಸಿದ್ದಾರೆ. ಪ್ರಸ್ತುತ ರೇಷ್ಮೆ ನೂಲಿಗೆ ಬೇಡಿಕೆ ಇಲ್ಲದ ಕಾರಣ ಗೂಡಿನ ದರ ಕುಸಿದಿದೆ.