ಕಮಲಪಡೆಗೆ ಸ್ವರ್ಗಕಕೆ ಮೂರೇ ಗೇಣು

MLK PP 13
Published on

ಕೆ.ಕೆಂಚಪ್ಪ ಮೊಳಕಾಲ್ಮೂರು: ಮೊಳಕಾಲ್ಮೂರು ಪಟ್ಟಣ ಪಂಚಾಯಿತಿ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕಮಲ ಪಡೆ ಗದ್ದುಗೆ ಏರುವ ಕಾತುರದಲ್ಲಿದ್ದು ಬಿಜೆಪಿ ಸದಸ್ಯರಿಗೆ ಸ್ವರ್ಗಕ್ಕೆ ಮೂರೇ ಗೇಣು ಎಂಬಂತಾಗಿದೆ.

16 ಸದಸ್ಯ ಬಲದ ಪ.ಪಂ.ನಲ್ಲಿ ಬಿಜೆಪಿ 8, ಕಾಂಗ್ರೆಸ್ 6, ಇಬ್ಬರು ಪಕ್ಷೇತರ ಸದಸ್ಯರಿದ್ದಾರೆ.ಒಂದು ಕಾಲದಲ್ಲಿ ಪ್ರಾಬಲ್ಯ ಮೆರೆದಿದ್ದ ಜೆಡಿಎಸ್ ಶೂನ್ಯ ಸಾಧನೆ ಮಾಡಿದೆ.

ಪಕ್ಷೇತರರು ಈಗಾಗಲೇ ಬಿಜೆಪಿಯಲ್ಲಿ ಗುರುತಿಸಿಕೊಂಡ ಕಾರಣ ಕಮಲ ಪಡೆ ಹಾದಿ ಸುಗಮವಾಗಿದ್ದು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ಪ್ರಕಟವಾಗುತ್ತಿದ್ದಂತೆ ರಾಜಕೀಯ ಲೆಕ್ಕಾಚಾರ ಶುರುವಾಗಿವೆ.

ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆದು ಒಂದೂವರೆ ವರ್ಷ ಕಳೆದ ಬಳಿಕ ಮೀಸಲು ಪ್ರಕಟವಾಗಿದೆ.ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಉಪಾಧ್ಯಕ್ಷ ಸಾಮಾನ್ಯ ಮಹಿಳೆಗೆ ಮೀಸಲಿದೆ.

ಅಧ್ಯಕ್ಷ- ಉಪಾಧ್ಯಕ್ಷ ಹುದ್ದೆಗಳ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿತರು ಗದ್ದುಗೆ ಏರಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದು ವರಿಷ್ಠರ ಮನವೊಲಿಕೆಯಲ್ಲಿ ತೊಡಗಿದ್ದಾರೆ.

ಈ ಬಾರಿ 9 ಮಹಿಳಾ ಸದಸ್ಯರಿರುವುದು ವಿಶೇಷ: ಸಂಖ್ಯಾಬಲದಲ್ಲಿ ಮುಂದಿದ್ದೇವೆ ಎಂಬ ಹುಮ್ಮಸ್ಸಿನಲ್ಲಿರುವ ಬಿಜೆಪಿ ಸದಸ್ಯರು ಎರಡೂ ಹುದ್ದೆಗಳ ಮೇಲೆ ಕಣ್ಣಿಟ್ಟು ಸಚಿವ ಶ್ರೀರಾಮುಲು ಅವರ ಮೇಲೆ ಒತ್ತಡ ಹಾಕುತ್ತಿದ್ದಾರೆ.

ಈ ಹಿಂದೆ ಅಧ್ಯಕ್ಷ ಸ್ಥಾನ ಎಸ್ಟಿ ಮಹಿಳೆಗೆ ಮೀಸಲಿತ್ತು. 2ನೇ ವಾರ್ಡ್ ಸದಸ್ಯೆ ಲೀಲಾವತಿ ಅಧ್ಯಕ್ಷ ಪಟ್ಟ ನನ್ನದೇ ಎಂಬ ಖುಷಿಯಲ್ಲಿದ್ದರು. ಸರ್ಕಾರ ಹೊಸ ಮೀಸಲಾತಿ ಪ್ರಕಟಿಸಿದ್ದರಿಂದ ಆಕಾಂಕ್ಷಿಗಳ ಪಟ್ಟಿ ಜಾಸ್ತಿಯಾಗಿದೆ.

ಆರು ಸದಸ್ಯ ಬಲದ ಕಾಂಗ್ರೆಸ್‌ಗೆ ಅಧಿಕಾರ ರಚಿಸಲು ಮೂವರ ಅಗತ್ಯವಿದೆ. ಸುಮ್ಮನೆ ಕೂರದ ಕೈ ಪಡೆ ಅಧಿಕಾರ ಧಕ್ಕಿಸಿ ಕೊಳ್ಳಲು 9 ಸದಸ್ಯರನ್ನು ಹೊಂದಿಸಲು ತಂತ್ರ ಹೆಣೆಯುತ್ತಿದೆ. ವಿಧಾನ ಪರಿಷತ್ ಸದಸ್ಯರು ಹಾಗೂ ಪಕ್ಷೇತರರ ಮೇಲೆ ಕಣ್ಣಿಟ್ಟಿದೆ.

ಕಳೆದ ಬಾರಿ 15 ಸದಸ್ಯರ ಬಲ ಹೊಂದಿದ್ದ ಪಪಂನಲ್ಲಿ ಕಾಂಗ್ರೆಸ್ ಅತ್ಯಧಿಕ ಅಂದರೆ 6 ಸ್ಥಾನ ಹೊಂದಿತ್ತು. ಬಿಎಸ್‌ಆರ್ ಕಾಂಗ್ರೆಸ್ 5, ಜೆಡಿಎಸ್ 1 , ಬಿಜೆಪಿ 1, ಇಬ್ಬರು ಪಕ್ಷೇತರರು ಸೇರಿ 9 ಸದಸ್ಯರ ಮೈತ್ರಿಕೂಟ ಅಧಿಕಾರ ಗದ್ದುಗೆ ಏರಿತ್ತು. ಈ ಮೈತ್ರಿಕೂಟ ತುಂಬ ದಿನ ಬಾಳದೆ ಕಾಂಗ್ರೆಸ್ ಮತ್ತೆ ಅಧಿಕಾರ ಹಿಡಿದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net