

ಮೊಳಕಾಲ್ಮೂರು: ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಸಂಘದ ಪದಾಧಿಕಾರಿಗಳು ತಹಸೀಲ್ದಾರರಿಗೆ ಬುಧವಾರ ಮನವಿ ಸಲ್ಲಿಸಿದರು.
ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ಬಹುರಾಷ್ಟ್ರೀಯ ಕಂಪನಿಗಳಿಂದ ಕೃಷಿ ಉತ್ಪನ್ನಗಳ ನೇರ ಖರೀದಿಗೆ ಕಾಯ್ದೆ ತಿದ್ದುಪಡಿ ತಂದಿರುವ ರಾಜ್ಯ ಸರ್ಕಾರದ ನಿರ್ಧಾರ ಸರಿಯಲ್ಲ. ಇದರಿಂದ ರೈತರ ಹಕ್ಕನ್ನು ಕಸಿದುಕೊಂಡಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಬೆನ್ನಲುಬಾಗಿರುವ ರೈತರು ಅತಿವೃಷ್ಟಿ, ಅನಾವೃಷ್ಟಿಗೆ ಸಿಲುಕಿ ನಿರಂತರ ನಷ್ಟ ಅನುಭವಿಸುತ್ತಿದ್ದಾರೆ. ಅವರ ಕೃಷಿ ಬದುಕನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಕರಾತ್ಮಕ ಚಿಂತನೆ ನಡೆಸದೇ ಬಂಡವಾಳಶಾಹಿಗಳ ಹಿತರಕ್ಷಣೆಗೆ ಮುಂದಾಗಿದೆ ಎಂದು ದೂರಿದರು.
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ತಾಲೂಕು ಅಧ್ಯಕ್ಷ ಬೆಳಗಲ್ ಈಶ್ವರಯ್ಯಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರ‌್ಲಹಳ್ಳಿ ರವಿಕುಮಾರ, ಡಿ.ಬಿ.ಕೃಷ್ಣಮೂರ್ತಿ, ಚಂದ್ರಪ್ಪ, ಮಂಜಣ್ಣ, ನಿಂಗಣ್ಣ, ಮುಕ್ಕಣ್ಣ, ನಾಗೇಂದ್ರಪ್ಪ, ಚಂದ್ರಶೇಖರಯ್ಯ, ದೊಡ್ಡಪಾಲಯ್ಯ, ಬೊಮ್ಮಯ್ಯ ಇದ್ದರು.
ದೇವರ ಎತ್ತುಗಳಿಗೆ ಮೇವು ನೀಡಿ: ರಾಯಾಪುರ ಮ್ಯಾಸರಹಟ್ಟಿ ಸಮೀಪದ ಅಡವಿಯಲ್ಲಿರುವ ಶ್ರೀ ಶೈಲಮಲ್ಲಿಕಾರ್ಜುಸ್ವಾಮಿ ದೇಗುಲಕ್ಕೆ ಸೇರಿದ 150 ದೇವರ ಎತ್ತುಗಳಿಗೆ ಮೇವು, ನೀರಿನ ಸೌಕರ್ಯ ಕಲ್ಪಿಸಬೇಕು ಎಂದು ರೈತರು ಆಗ್ರಹಿಸಿದರು.