ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿ

MLK SSLC 22
Published on

ಮೊಳಕಾಲ್ಮೂರು: ಕರೊನಾ ಭಯದ ಆತಂಕವನ್ನು ಮನಸ್ಸಿನಿಂದ ಕಿತ್ತೊಗೆದು ಪರೀಕ್ಷೆ ಬರೆಯಲು ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಪಾಲಕರು, ಶಿಕ್ಷಕರಿಂದ ಆಗಬೇಕು ಎಂದು ತಹಸೀಲ್ದಾರ್ ಎಂ.ಬಸವರಾಜ್ ಸಲಹೆ ನೀಡಿದರು.

ಶಿಕ್ಷಣ, ಆರೋಗ್ಯ ಇಲಾಖೆ ಜಂಟಿ ಸಹಯೋಗದಲ್ಲಿ ತಾಪಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದರು.

ಮಕ್ಕಳ ಸುರಕ್ಷತೆಗಾಗಿ ಸರ್ಕಾರ ಪರೀಕ್ಷೆ ಮುಂದೂಡಿತ್ತು. ಆದರೆ, ಅವರ ಭವಿಷ್ಯದ ದೃಷ್ಟಿಯಿಂದ ಜೂ. 25ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಘೋಷಿಸಿದೆ. ಪಾಲಕರು ಮಕ್ಕಳ ಆರೋಗ್ಯ ಕಾಳಜಿ ವಹಿಸಿ, ಜಾಗರೂಕತೆಯಿಂದ ಇರಲು ಅರಿವು ಮೂಡಿಸಬೇಕು ಎಂದರು.

ಶಿಕ್ಷಣ ಸಂಯೋಜಕ ಓಂಕಾರಪ್ಪ ಮಾತನಾಡಿ, ದೂರದ ಗ್ರಾಮಗಳಿಂದ ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆತರಲು 14 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ನಿಯೋಜಿಸಿರುವ ಸಿಬ್ಬಂದಿ ಬೆಳಗ್ಗೆ 7.30ಕ್ಕೆ ಹಾಜರಿರಬೇಕು. ಕೇಂದ್ರಗಳಲ್ಲಿ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂದು ತಿಳಿಸಿದರು.

ಸ್ಕೌಟ್ಸ್ ಸಂಸ್ಥೆಯಿಂದ 2500 ಮಾಸ್ಕ್‌ಗಳನ್ನು ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರಿಗೆ ನೀಡಲಾಯಿತು. ತಾಲೂಕು ಆರೋಗ್ಯಾಧಿಕಾರಿ ಡಾ.ಪದ್ಮಾ, ಜಿಲ್ಲಾ ಶಿಕ್ಷಣ ಆರೋಗ್ಯಾಧಿಕಾರಿ ಡಿ.ಚಿದಾನಂದಪ್ಪ, ಬಿಸಿಯೂಟ ಅಧಿಕಾರಿ ಪಾತಲಿಂಗಪ್ಪ, ಪ್ರಾಂಶುಪಾಲ ಡಿ.ಸೂರಯ್ಯ, ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರಾದ ಎ.ಷಣ್ಮಖಪ್ಪ, ಡಿ.ವಿ.ಕೃಷ್ಣಮೂರ್ತಿ, ಮಹಮದ್, ಎಸ್.ವಿ.ಪ್ರಕಾಶ್, ಸಣ್ಣಯಲ್ಲಪ್ಪ, ತಿಪ್ಪೇಸ್ವಾಮಿ, ವೆಂಕಟೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net