

ಮೊಳಕಾಲ್ಮೂರು: ತಾಲೂಕಿನ ರಾಂಪುರ ವ್ಯಾಪ್ತಿಯ ಕಿರು ಅರಣ್ಯ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ಸಿಪಿಐ ಕಾರ್ಯಕರ್ತರು ತಹಸೀಲ್ದಾರ್ ಎಂ.ಬಸವರಾಜ್ ಅವರಿಗೆ ಬುಧವಾರ ಮನವಿ ಪತ್ರ ಸಲ್ಲಿಸಿದರು.
ಹಕ್ಕುಪತ್ರ ವಿತರಣೆಯಲ್ಲಿ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ರಾಂಪರ ಸರ್ವೇ ನಂಬರ್ 47, ಬಸಾಪುರ ಸರ್ವೇ ನ. 14 ಹಾಗೂ ದಡಗೂರು ಸರ್ವೇ ನಂಬರ್ 23ರಲ್ಲಿ 150 ಬಡ ರೈತರು ಕಳೆದ 50 ವರ್ಷಗಳಿಂದಲೂ ಸಾಗುವಳಿ ಮಾಡುತ್ತಿದ್ದಾರೆ. ಆದರೆ, ಈವರೆಗೆ ಸಮಸ್ಯೆ ಪರಿಹರಿಸಿಲ್ಲ ಎಂದು ಆಪಾದಿಸಿದರು.
ಸಾಗುವಳಿ ಹಕ್ಕುಪತ್ರ ಪಡೆಯಲು ಅರ್ಜಿ ಸಲ್ಲಿಸಿದ ನಂತರ ಅರಣ್ಯ, ಪರಿಶಿಷ್ಟ, ಕಂದಾಯ ಇಲಾಖೆಗಳ ಅಧಿಕಾರಿಗಳು ಜಂಟಿ ಸರ್ವೇ ಮುಗಿಸಿ ವರ್ಷಗಳೇ ಕಳೆದಿವೆ. ಈ ಬಗ್ಗೆ ವಿಭಾಗ ಮಟ್ಟದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಬಡವರಿಗೆ ಸಾಮಾಜಿಕ ನ್ಯಾಯ ಒದಗಿಸಿಕೊಡುವಲ್ಲಿ ಅಧಿಕಾರಿಗಳ ವಿಳಂಬ ಧೋರಣೆ ಸರಿಯಲ್ಲ. ತಹಸೀಲ್ದಾರರು ಕೂಡಲೇ ಗಮನಹರಿಸಿ ಸ್ವಾಧೀನ ಹಕ್ಕುಪತ್ರ ಕೊಡಿಸಬೇಕೆಂದು ಆಗ್ರಹಿಸಿದರು.
ಸಿಪಿಐ ಒಕ್ಕೂಟದ ತಾಲೂಕು ಕಾರ್ಯದರ್ಶಿ ಜಾಫರ್, ರೈತರಾದ ಕಾಮಯ್ಯ, ಬಸಣ್ಣ, ನಾಗಮ್ಮ, ಮಹಾದೇವಿ, ಪಾಲಮ್ಮ, ಬೋರಯ್ಯ, ಪದ್ಮಾವತಿ, ಅಂಜಿನಪ್ಪ, ಮೂರ್ತಿ, ಮಲ್ಲಯ್ಯ ಇತರರಿದ್ದರು.