

ಮೊಳಕಾಲ್ಮೂರು: ಕರೊನಾ ಸೋಂಕು ಮುಂದಿನ ದಿನಗಳಲ್ಲಿ ಇನ್ನಷ್ಟು ಉಲ್ಬಣವಾಗುವ ಸಾಧ್ಯತೆಯಿದ್ದು, ಹತೋಟಿ ಕ್ರಮಕ್ಕೆ ಓಪನ್ ವೈದ್ಯಕೀಯ ಸೇವೆಗೆ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು.
ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ಶನಿವಾರ ಬೆಂಗಳೂರಿನ ಸಮರ್ಥ ಅಂಗವಿಕಲರ ಸಂಸ್ಥೆಯಿಂದ ಕರೊನಾ ವಾರಿಯರ್ಸ್ ಸಿಬ್ಬಂದಿಗೆ 15 ಲಕ್ಷ ರೂ. ಮೌಲ್ಯದಲ್ಲಿ ಸ್ಯಾನಿಟೈಸರ್, ಮಾಸ್ಕ್, ಹಾಗೂ ಪಿಪಿಇ ಕಿಟ್ ವಿತರಿಸಿ ಮಾತನಾಡಿದರು.
ಕಷ್ಟ ಕಾಲದಲ್ಲಿ ಸಮರ್ಥ ಸಂಸ್ಥೆ ಸಮಾಜಮುಖಿ ಸೇವೆ ಮಾಡುತ್ತಿರುವುದು ಶ್ಲಾಘನೀಯ, ರಾಜ್ಯದಲ್ಲಿ ಕರೊನಾ ಸುಧಾರಣೆ ಹಂತದಲ್ಲಿದೆ ಎನ್ನುವಷ್ಟರಲ್ಲಿ ಸೋಂಕು ಹೆಚ್ಚಾಗುತ್ತಿದೆ ಎಂದರು.
ಕರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವವರು ಸೋಂಕಿನಿಂದ ಮೃತಪಟ್ಟರೆ 50 ಲಕ್ಷ ರೂ. ಪರಿಹಾರ ಸಿಗಲಿದೆ. ಇದರಲ್ಲಿ ಗೊಂದಲ ಬೇಡ ಎಂದು ಸ್ಪಷ್ಟಪಡಿಸಿದರು.
ಡಿಎಚ್‌ಒ ಪಾಲಾಕ್ಷ ಮಾತನಾಡಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು ಜಿಲ್ಲೆಯ 4 ಲಕ್ಷ ಮನೆಗಳಿಗೆ ಭೇಟಿ ಆರೋಗ್ಯ ಸಮೀಕ್ಷೆ ನಡೆಸಿದ್ದಾರೆ ಎಂದರು.
ನೆಗಡಿ, ಕೆಮ್ಮು, ಜ್ವರ ಕಂಡು ಬಂದವರ 2464 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ 2252 ಮಂದಿ ನೆಗೆಟಿವ್ ವರದಿ ಬಂದಿವೆ. 10 ಜನ ಪಾಸಿಟಿವ್ ಕೇಸುಗಳ ಪೈಕಿ ಶನಿವಾರ ಐವರಿಗೆ ನೆಗೆಟಿವ್ ವರದಿ ಬಂದಿರುವುದು ಖುಷಿಯ ಸಂಗತಿ ಎಂದು ಹೇಳಿದರು.
ತಾಪಂ ಇಒ ಪ್ರಕಾಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಪದ್ಮಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಿ.ಚಿದಾನಂದಪ್ಪ, ಸಮರ್ಥ ಅಂಗವಿಕಲ ಸಂಸ್ಥೆ ಮುಖ್ಯಸ್ಥ ಡಾ.ಮಹಾಂತೇಶ್, ಡಾ.ರೇಣುಕಾ, ಡಾ.ಮಂಜುನಾಥ, ಮುಖಂಡರಾದ ಜಯಪಾಲ, ಪರಮೇಶಿ, ಟಿ.ರವಿಕುಮಾರ್, ಸಂಜೀವಮೂರ್ತಿ, ವಿಜಯ್ ಇತರರಿದ್ದರು.