ಮೆಕ್ಕಾಗೆ ಹೋಗಿ ಬಂದವರಿಂದ ಕರೊನಾ ಭೀತಿ

MLK BETI 01 (1)
Published on

ಮೊಳಕಾಲ್ಮೂರು: ಇತ್ತೀಚೆಗೆ ಮೆಕ್ಕಾಗೆ ಹೋಗಿ ಬಂದಿದ್ದ ತಾಲೂಕಿನ ದೇವಸಮುದ್ರದ ದಂಪತಿಯನ್ನು ಕರೊನಾ ಪರೀಕ್ಷೆಗೆ ಒಳಪಡಿಸಿದಾಗ ಕರೊನಾ ಲಕ್ಷಣ ಕಂಡುಬಂದಿಲ್ಲ, ಆದ್ದರಿಂದ ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ತಾಲೂಕು ವೈದ್ಯಾಧಿಕಾರಿ ತಿಳಿಸಿದ್ದಾರೆ.

ಫೆಬ್ರವರಿಯಲ್ಲಿ ಮೆಕ್ಕಾಗೆ ಹೋಗಿದ್ದ ಈ ದಂಪತಿ ಮಾ.3ರಂದು ವಾಪಸಾಗಿದ್ದರು. ರಾಂಪುರ ಆಸ್ಪತ್ರೆ ವೈದ್ಯರು ತಪಾಸಣೆ ನಡೆಸಿ ಯಾವುದೇ ಜ್ವರವಿಲ್ಲ ಮುಂಜಾಗ್ರತೆಯಾಗಿ 14 ದಿನ ಮನೆಯಲ್ಲಿರಿ ಎಂದು ತಿಳಿಸಿದ್ದರು.

ಸಾರ್ವಜನಿಕರ ದೂರು: ರಾತ್ರಿ ವೇಳೆ ಊರು ಸುತ್ತುತ್ತಾರೆ. ಇವರಿಂದ ಇತರರಿಗೆ ಕರೊನಾ ವೈರಸ್ ಹರಡುವ ಭೀತಿ ಇದೆ. ಕೂಡಲೇ ಇವರನ್ನು ಗೃಹ ಬಂಧನದಲ್ಲಿರಿಸಬೇಕೆಂದು ಸಾರ್ವಜನಿಕರು, ತಹಸೀಲ್ದಾರ್ ಎಂ.ಬಸವರಾಜ್, ತಾಪಂ ಇಒ ಪ್ರಕಾಶ್ ಅವರನ್ನು ಫೋನ್ ಮೂಲಕ ಸಂಪರ್ಕಿಸಿದ್ದರು.

ಈ ಹಿನ್ನೆಲೆಯಲ್ಲಿ ಬುಧವಾರ ಅಧಿಕಾರಿಗಳು ದಂಪತಿ ಮನೆಗೆ ಭೇಟಿ ನೀಡಿ ಅವರನ್ನು ತರಾಟೆಗೆ ತೆಗೆದುಕೊಂಡರು. ವಿನಾಕಾರಣ ಊರೆಲ್ಲ ಸುತ್ತಾಡುವುದು ಸರಿಯಲ್ಲ. ಹೋಂ ಕ್ವಾರಂಟೈನ್ ಅವಧಿ ಮುಗಿವವರೆಗೆ ಮನೆಯಲ್ಲೇ ಇರಬೇಕು ಎಂದು ಸೂಚಿಸಿದರು.

ಬಳಿಕ ರಾಂಪುರದ ವೈದ್ಯರನ್ನು ಕರೆಸಿ ಪುನಃ ತಪಾಸಣೆಗೆ ಒಳಪಡಿಸಿದಾಗ ವರದಿ ನೆಗೆಟಿವ್ ಬಂದ ಕಾರಣ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಇವರಿಗೆ ಕರೊನಾ ಸೋಂಕಿಲ್ಲ ಎಂದು ಜನರಲ್ಲಿದ್ದ ಭೀತಿ ದೂರ ಮಾಡಿದರು.

ಕಂದಾಯ ಅಧಿಕಾರಿ ಗೋಪಾಲ್, ಪಿಡಿಒ ಕುಮಾರಸ್ವಾಮಿ. ಬಾಂಡ್ರಾವಪ್ಪ, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಪೊಲೀಸರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net