ಕರೊನಾ ಟೈಮಲ್ಲಿ ಕೈಯಿಡಿದ ಖಾತ್ರಿ ಕೆಲಸ

MLK KATRI 11 (1)
Published on

ಮೊಳಕಾಲ್ಮೂರು: ಲಾಕ್‌ಡೌನ್ ನಡುವೆಯೂ ತಾಲೂಕಿನ ಸಾವಿರಾರು ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಆಸರೆಯಾಗಿದೆ.

ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಮಾಡಿದರೆ ಅಭ್ಯಂತರವಿಲ್ಲ ಎಂಬ ಸಲಹೆ ಮೇರೆಗೆ ಮಾ.23ರಿಂದ ಏ.10 ವರೆಗೆ ಆಯಾ ಗ್ರಾಪಂ ಮಟ್ಟದಲ್ಲಿ ವೈಯಕ್ತಿಕ ಹಾಗೂ ಸಾಮೂಹಿಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು.

1,813 ಜನರಿಗೆ ಕೆಲಸ ನೀಡಲಾಗಿದ್ದು, 1.62 ಕೋಟಿ ರೂ. ಆಯಾ ಕೂಲಿಕಾರರ ಖಾತೆಗೆ ಹಂತ ಹಂತವಾಗಿ ಜಮಾ ಆಗುತ್ತಿದೆ ಎಂದು ಹೇಳಲಾಗಿದೆ.

ತಾಲೂಕಿನಲ್ಲಿ 30198 ಜಾಬ್ ಕಾರ್ಡ್ ಹೊಂದಿರುವ ಕುಟುಂಬಗಳಿವೆ. 2019-20ನೇ ಸಾಲಿನಲ್ಲಿ ಬದು, ಕೃಷಿ ಹೊಂಡ, ಜಮೀನು, ಕೆರೆ, ಗೋಕಟ್ಟೆ, ಕಲ್ಯಾಣಿಗಳ ಅಭಿವೃದ್ಧಿಗೆ ಕ್ರಿಯಾಯೋಜನೆ ಪಟ್ಟಿಯಂತೆ ಗ್ರಾಪಂ ಮಟ್ಟದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ವಿವಿಧ ಕಾಮಗಾರಿಯಲ್ಲಿ ಈವರೆಗೆ ಒಟ್ಟು 23.64 ಕೋಟಿ ಹಣ ಕೂಲಿಕಾರರ ಖಾತೆಗೆ ಜಮಾ ಆಗಿದೆ. 13.45 ಕೋಟಿ ರೂ. ಸಾಮಗ್ರಿ ವೆಚ್ಚ ತಗುಲಿದೆ. ಖಾತ್ರಿ ಕೆಲಸ ಪ್ರಗತಿಯಲ್ಲಿ ಮೊಳಕಾಲ್ಮೂರು ತಾಲೂಕು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ.

ತಾಪಂ ಇಒ ಪ್ರಕಾಶ್ ಹೇಳಿಕೆ: ಬಯಲು ಸೀಮೆ ಜನರಿಗೆ ಮಳೆಯಾಶ್ರಿತ ಭೂಮಿಯೇ ಜೀವಾಳ. ಅದರ ನಡುವೆ ಖಾತ್ರಿ ಕೆಲಸ ಬಡ ಜನರ ಜೀವನಕ್ಕೆ ಆಧಾರವಾಗಿದೆ. ಬೇಸಿಗೆ ದಿನಗಳಲ್ಲಿ ಕೂಲಿಗಾಗಿ ಐದಾರು ತಿಂಗಳು ಗುಳೆ ಹೋಗುತ್ತಿದ್ದ ಸಾವಿರಾರು ಕುಟುಂಬಗಳೀಗ ಇಲ್ಲೇ ಉಳಿದು ಕೈತುಂಬಾ ಕೆಲಸ ಗಿಟ್ಟಿಸಿಕೊಂಡಿವೆ. ಕೇಂದ್ರ ಸರ್ಕಾರ ಕೂಲಿ ಹಣವನ್ನು ಏ.1ರಿಂದ 275 ರೂ.ಗೆ ಹೆಚ್ಚಿಸಿದ್ದು ವರದಾನವಾಗಿದೆ. ಕರೊನಾ ನಿಯಂತ್ರಣಕ್ಕೆ ಐದು ಜನರ ತಂಡ ರಚಿಸಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಮಾಡುವಂತೆ ತಿಳಿವಳಿಕೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net