ಪೌರಕಾರ್ಮಿಕರಿಗೆ ಗೌರವ ಸಮರ್ಪಣೆ

MLK SANMANA 02
Published on

ಮೊಳಕಾಲ್ಮೂರು: ಕಾರ್ಮಿಕ ದಿನವನ್ನು ಮೊಳಕಾಲ್ಮೂರು ಪಟ್ಟಣದಲ್ಲಿ ಶನಿವಾರ ವಿಶೇಷವಾಗಿ ಆಚರಿಸಲಾಯಿತು.

ನಿತ್ಯ ಪಟ್ಟಣವನ್ನು ಸ್ವಚ್ಛತೆಗೊಳಿಸುವ ಪಪಂ 30 ಪೌರಕಾರ್ಮಿಕರನ್ನು ವಿಶೇಷವಾಗಿ ಗೌರವಿಸುವ ಜತೆಗೆ ಆಹಾರದ ಕಿಟ್ ವಿತರಿಸಲಾಯಿತು.

ಪಪಂ ಆವರಣದಲ್ಲಿ 8ನೇ ವಾರ್ಡ್ ಸದಸ್ಯೆ ಲಕ್ಷ್ಮೀದೇವಮ್ಮ ಹಮ್ಮಿಕೊಂಡಿದ್ದ ಕಾರ್ಯಕ್ರಮ ಗಮನ ಸೆಳೆಯಿತು.

ಬಳಿಕ ಮಾತನಾಡಿದ ಲಕ್ಷ್ಮೀದೇವಮ್ಮ, ಪಟ್ಟಣ ಮತ್ತು ಗ್ರಾಮೀಣ ಜನ ವಸತಿ ಪ್ರದೇಶದಲ್ಲಿ ಬಿಸಿಲು, ಮಳೆ, ದುರ್ವಾಸನೆಗೆ ಜಗ್ಗದೆ ಸದಾ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಪೌರಕಾರ್ಮಿಕ ಸೇವೆ ಅನನ್ಯ ಎಂದರು.

ತಮ್ಮ ಆರೋಗ್ಯವನ್ನು ಲೆಕ್ಕಿಸದೇ ಜನರ, ಸಮಾಜದ ಆರೋಗ್ಯಕ್ಕೆ ಹಗಲು-ರಾತ್ರಿ ಶ್ರಮಿಸುವ ಶ್ರಮಿಕ ವರ್ಗ ಪೌರಕಾರ್ಮಿಕರು. ಇವರ ಸೇವೆ ಗುರುತಿಸುವ ಜತೆಗೆ ಸಂಕಷ್ಟಕ್ಕೆ ಸಿಲುಕಿದವರಿಗೆ ಸಹಾಯ ಹಸ್ತ ಚಾಚುವುದು ಸಮಾಜದ ಹೊಣೆ ಎಂದು ಹೇಳಿದರು.

ಬಿಜೆಪಿ ಮಂಡಲ ಅಧ್ಯಕ್ಷ ಡಾ.ಮಂಜುನಾಥ್ ಮಾತನಾಡಿ, ಜನ ಸೇವೆಯೇ ಜರ್ನಾದನ ಸೇವೆ ಎಂದು ಸ್ವಚ್ಛತೆಯಲ್ಲಿಯೇ ಮುಪ್ಪಾಗುವ ಕಾರ್ಮಿಕರು ನಮ್ಮೆಲ್ಲರಿಗೂ ಆರೋಗ್ಯ ಭಾಗ್ಯ ಕಲ್ಪಿಸುವ ನಿಜ ದೇವರುಗಳು ಎಂದು ಬಣ್ಣಿಸಿದರು.

ಪಪಂ ಆಡಳಿತ ಪೌರಕಾರ್ಮಿಕರ ಆರೋಗ್ಯದ ಹಿತ ದೃಷ್ಠಿಯಿಂದ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕು. ಕಾಲಕಾಲಕ್ಕೆ ವೇತನ ನೀಡುವ ಮೂಲಕ ಅವರ ನೆಮ್ಮದಿ ಬದುಕಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಪಪಂ ಮುಖ್ಯಾಧಿಕಾರಿ ಎಚ್.ಕಾಂತರಾಜ್, ಇಂಜಿನಿಯರ್ ರೇವಣಸಿದ್ದೇಶ್ವರ, ಸದಸ್ಯರಾದ ಟಿ.ರವಿಕುಮಾರ್, ಲಕ್ಷ್ಮಣ, ಮಂಜುನಾಥ, ತಿಪ್ಪೇಶಿ, ಭೀಮಣ್ಣ, ರಘು, ಬಿಜೆಪಿ ನಗರ ಅಧ್ಯಕ್ಷ ಶಾಂತರಾಮ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net