

ಮೊಳಕಾಲ್ಮೂರು: ಸಚಿವ ಡಾ.ಸುಧಾಕರ್ ಹಾಗೂ ನಾನು ಇಬ್ಬರೂ ಸಹೋದರರು. ನಮ್ಮಿಬ್ಬರ ನಡುವೆ ಯಾವುದೇ ಪ್ರತಿಷ್ಠೆಯಾಗಲಿ, ಭಿನ್ನಾಭಿಪ್ರಾಯವಾಗಲ ಇಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದರು.
ಸೋಂಕು ಹತೋಟಿಗೆ ತರುವ ವಿಷಯದಲ್ಲಿ ಪ್ರತಿಷ್ಠೆ ತೋರುವಂತ ಕೀಳು ಮಟ್ಟದ ರಾಜಕಾರಣ ನಮ್ಮಿಬ್ಬರಿಗೂ ಇಲ್ಲ. ಜನಸೇವೆಗೆ ನಮ್ಮ ಮೊದಲ ಆದ್ಯತೆ ಎಂದು ರಾಯಾಪುರದಲ್ಲಿ ಶನಿವಾರ ತಿಳಿಸಿದರು.
ಸುಡುಗಾಡು ಸಿದ್ದರಿಗೆ ಆಹಾರದ ಕಿಟ್ ವಿತರಣೆ: ತಾಲೂಕಿನ ರಾಯಾಪುರ ಸಮೀಪದ ಸುಡುಗಾಡು ಸಿದ್ದರ ಕುಟುಂಬಗಳಿಗೆ ಆರೋಗ್ಯ ಸಚಿವ ಶ್ರೀರಾಮುಲು ಶನಿವಾರ ಆಹಾರದ ಕಿಟ್ ವಿತರಿಸಿದರು.
ಈ ವೇಳೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಪದೆ ಪದೇ ಮನವಿ ಮಾಡಿದರೂ ಅಲ್ಲಿ ನೆರೆದವರು ಸ್ಪಂದಿಸದಿದ್ದಾಗ ಸಚಿವರು ಬೇಸರಿಸಿದರು.
ಕರೊನಾ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ, ಪೋಲೀಸರು, ಆಡಳಿತ ವ್ಯವಸ್ಥೆ ಪ್ರಾಣದ ಹಂಗುತೊರೆದು ಕೆಲಸ ಮಾಡುತ್ತಿದೆ. ಪ್ರಸ್ತುತ ರಾಜ್ಯದಲ್ಲಿ 131 ಸೋಂಕಿತ ಪ್ರಕರಣಗಳು ದಾಖಲಾಗಿವೆ. ನಾಲ್ವರು ಮೃತಪಟ್ಟಿದ್ದಾರೆ ಎಂದರು.
ದಿಲ್ಲಿಯ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದವರು ಮುಚ್ಚುಮರೆ ಮಾಡದೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
ಪ್ರಧಾನಿ ಮೋದಿ ಅವರ ಕರೆಯಂತೆ ಭಾನುವಾರ ರಾತ್ರಿ 9ಕ್ಕೆ 9 ನಿಮಿಷ ಪ್ರತಿ ಮನೆಯಲ್ಲಿ ದೀಪ ಬೆಳಗಿಸಿ ಎಂದು ಮನವಿ ಮಾಡಿದರು.ತಹಸೀಲ್ದಾರ್‌ಎಂ.ಬಸವರಾಜ್, ತಾಪಂ ಇಒ ಪ್ರಕಾಶ್,ಡಾ.ಪದ್ಮಾ. ಪ್ರೇಮನಾಥ್, ಡಿ.ಚಿದಾನಂದಪ್ಪ, ಸಿಪಿಐ ಗೋಪಾಲನಾಯ್ಕ, ಪಿಎಸ್‌ಐ ಬಸವರಾಜ್, ಬಿಜೆಪಿ ಮಂಡಲ ಅಧ್ಯಕ್ಷ ಡಾ.ಮಂಜುನಾಥ, ಪಾಪೇಶ, ಗ್ರಾಪಂ ಅಧ್ಯಕ್ಷೆ ಸುಮಲತಾ ಇತರರಿದ್ದರು.