ದೇವರ ಎತ್ತುಗಳಿಗೆ ಮೇವು, ನೀರು ಕಲ್ಪಿಸಿ

MLK MANAVI 24
Published on

ಮೊಳಕಾಲ್ಮೂರು: ತಾಲೂಕಿನ ರಾಯಾಪುರ ಸಮೀಪದ ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿ ದೇವರ ಎತ್ತುಗಳಿಗೆ ಶಾಶ್ವತವಾಗಿ ಮೇವು ನೀರಿನ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಮನವಿ ಸಲ್ಲಿಸಿದರು.

ಕಾರ್ಯಕ್ರಮದ ನಿಮಿತ್ತ ಶನಿವಾರ ಮೊಳಕಾಲ್ಮೂರಿಗೆ ಆಗಮಿಸಿದ್ದ ಸಚಿವರಿಗೆ ರಾಯಾಪುರ ಮ್ಯಾಸರಹಟ್ಟಿ ಗ್ರಾಮಸ್ಥರು, ದೇವರ ಗುಡಿಕಟ್ಟಿನವರು ಮನವಿ ಸಲ್ಲಿಸಿ, ಮನೆ ದೇವರನ್ನು ಗೋವುಗಳ ಆರಾಧನೆಯಲ್ಲೇ ಕಾಣುತ್ತಿದ್ದೇವೆ. ಅವುಗಳಿಗೆ ಊರ ಪ್ರವೇಶ ಇಲ್ಲ. ಅಡವಿಯ ಕೊಟ್ಟಿಗೆಯಲ್ಲೇ 150 ದೇವರ ಎತ್ತುಗಳನ್ನು ಆರೈಕೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಭಕ್ತರು, ದಾನಿಗಳು ಕೊಟ್ಟ ಮೇವನ್ನು ವ್ಯರ್ಥ ಮಾಡದೆ ಇಷ್ಟು ದಿನ ಪೋಷಿಸಿದ್ದೇವೆ. ಅಡವಿಯಲ್ಲೂ ಮೇವಿನ ಅಭಾವ ಇದೆ. ಆದ್ದರಿಂದ ಹತ್ತಿರದ ಗೋಶಾಲೆಯಲ್ಲಿ ಅವುಗಳಿಗೆ ಶಾಶ್ವತ ಮೇವು, ನೀರಿನ ವ್ಯವಸ್ಥೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ಕಿಲಾರಿಗಳಾದ ಕಾಮಯ್ಯ, ಮಲ್ಲಯ್ಯ, ಮುತ್ತಯ್ಯ, ಗ್ರಾಮಸ್ಥರಾದ ಬೋರಯ್ಯ, ಅಜ್ಜನ ಓಬಯ್ಯ, ಮಲ್ಲಿಕಾರ್ಜುನ, ಮಾರಣ್ಣ ಇತರರು ಉಪಸ್ಥಿತರಿದ್ದರು.

ಮನವಿ ಸ್ವೀಕರಿಸಿದ ಸಚಿವರು, 150 ರಾಸುಗಳಿರುವ ಕಾರಣ ದಿನಕ್ಕೆ ಎಷ್ಟು ಮೇವು ಬೇಕಾಗುತ್ತೆ ಎಂಬುದನ್ನು ಪರಿಶೀಲಿಸಿ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net