ಗುಂಡ್ಲೂರು ಕೆರೆಗೆ ಬೇಕು ಕಾಯಕಲ್ಪ

molakalmuru, Gundlur, Lake, Development
Published on

ಕೆ.ಕೆಂಚಪ್ಪ ಮೊಳಕಾಲ್ಮೂರು: ಮೊಳಕಾಲ್ಮೂರು ತಾಲೂಕಲ್ಲಿ ಅಲ್ಪಸ್ವಲ್ಪ ಮಳೆ ಸುರಿದರೆ ಸಾಕು ಇಲ್ಲಿನ ಜನರಿಗೆ ಅದೇ ಹಬ್ಬ, ಸಡಗರ.
ಆದರೆ, ಅಪರೂಪಕ್ಕೆ ಸುರಿಯುವ ಮಳೆ ನೀರು ಹಿಡಿದಿಟ್ಟುಕೊಳ್ಳುವ ಜಲಪಾತ್ರೆಗಳು ಮಾತ್ರ ಸುಸಜ್ಜಿತವಾಗಿ ನಿರ್ವಹಣೆ ಆಗುತ್ತಿಲ್ಲ ಎಂಬುದೇ ಆತಂಕದ ವಿಷಯ.

ಇದಕ್ಕೆ ಜೀವಂತ ಉದಾಹರಣೆ ತಾಲೂಕಿನ ಗುಂಡ್ಲೂರು ಕೆರೆ. ಏರಿ ಸಂಪೂರ್ಣ ಅವ್ಯವಸ್ಥೆಗೊಂಡಿದ್ದು, ಕೆರೆ ಅಂಗಳದಲ್ಲಿ ಕಣ್ಣು ಹಾಯಿಸದಷ್ಟು ದೂರ ಜಾಲಿ ಗಿಡಗಳು ರಾಚುತ್ತವೆ.
ನೂರಾರು ವರ್ಷಗಳ ಇತಿಹಾಸವಿರುವ ಗುಂಡ್ಲೂರು ಕೆರೆ ಹಲವು ಗ್ರಾಮಗಳ ಜನರ ಜೀವನಾಡಿಯಾಗಿದೆ. ಕಳೆದ ಒಂದು ವಾರದಿಂದ ಸುರಿದ ಮಳೆಗೆ ಅರ್ಧ ಕೆರೆ ತುಂಬಿದೆ. ಕೆರೆ ಏರಿ ಉದ್ದಗಲಕ್ಕೂ ಸೀಮೆ ಜಾಲಿ ಬೆಳೆದಿದ್ದು, ನೀರು ಸೋರಿಕೆಗೆ ಸಹಕಾರಿ ಆಗಿದೆ.

ಏರಿ ಶಿಥಿಲಗೊಂಡಿದ್ದು ಇದನ್ನು ದುರಸ್ತಿಗೊಳಿಸದಿದ್ದರೆ ನೀರು ವ್ಯರ್ಥವಾಗಲಿದೆ. ಕೆರೆ ಅಂಗಳದಲ್ಲಿ ಜಾಲಿ ಗಿಡಗಳು ಮರವಾಗಿ ಬೆಳೆದು ನಿಂತಿವೆ. ಇದರ ಕಾಯಕಲ್ಪದ ಬಗ್ಗೆ ಕೆರೆ ನಿರ್ವಹಣೆ ಇಲಾಖೆ ಅಧಿಕಾರಿಗಳು ಗಮನ ಹರಿಸಿದರೂ ಕ್ರಮವಹಿಸಿಲ್ಲ.

ಕಳೆದ ವರ್ಷ ಮಳೆಗಾಲದಲ್ಲಿ ಕೆರೆ ಮುಕ್ಕಾಲು ಭಾಗ ತುಂಬಿತ್ತು. ಕೆರೆ ಏರಿಯಲ್ಲಿ ನೀರು ಸೂರಿಕೆಯನ್ನು ತಡೆಯಲು ಜಿಲ್ಲಾಡಳಿತದ ಗಮನ ಹರಿಸಿದಾಗ ತಾತ್ಕಾಲಿಕವಾಗಿ ದುರಸ್ತಿ ಮಾಡಿಸಿ ಹೋದವರು ಮತ್ತೆ ಇತ್ತ ಕಡೆ ತಿರುಗಿ ನೋಡಿಲ್ಲ.

ನದಿಮೂಲಗಳಿಲ್ಲದ ಬಯಲು ಸೀಮೆ ಪ್ರದೇಶಕ್ಕೆ ಮಳೆಯೇ ಆಶ್ರಯವಾಗಿದೆ. ಇರುವ ಕೆರೆಗಳ ಕಾಯಕಲ್ಪವಾದರೆ ಮಳೆಗಾಲದಲ್ಲಿ ಹರಿಯುವ ನೀರು ಶೇಖರಣೆಯಿಂದ ಅಂತರ್ಜಲ ವೃದ್ಧಿಸಲಿದೆ. ಕೆರೆ ಸುತ್ತ ಇರುವ ತೋಟಗಾರಿಕೆ ಬೆಳೆಗಾರರ ಬದುಕು ಹಸನಾಗಲಿದೆ. ಕುಡಿವ ನೀರಿನ ಪರಿಸ್ಥಿತಿಯೂ ಸುಧಾರಿಸಲಿದೆ.
ಬೆಳಗಲ್ ಈಶ್ವರಯ್ಯಸ್ವಾಮಿ
ತಾಲೂಕು ಅಧ್ಯಕ್ಷ ರೈತ ಸಂಘ


ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಕೆರೆ ಅಂಗದಲ್ಲಿರುವ ಮರ, ಗಿಡಗಳ ತೆರವಿಗೆ, ಕೆರೆ ಏರಿ ಭದ್ರತೆಗೆ ಆಗಲಿರುವ ವೆಚ್ಚ ಅಂದಾಜು ಮಾಡಿ, ತಕ್ಷಣ ಕ್ರಮಕೈಗೊಳ್ಳಲಾಗುವುದು.
ಎಂ.ಬಸವರಾಜ್ ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net