ತೋಟಗಾರಿಕೆ ಬೆಳೆಯಲ್ಲಿ ತುಸು ಚೇತರಿಕೆ

MLK VISHESHA SUDDI 28 (2)
Published on

ಕೆ.ಕೆಂಚಪ್ಪ ಮೊಳಕಾಲ್ಮೂರು: ಕಳೆದ ಮುಂಗಾರಿನಲ್ಲಿ ಉತ್ತಮ ಮಳೆ ಬಂದ ಕಾರಣ ಕೆರೆ-ಕಟ್ಟೆ, ಕೊಳವೆಬಾವಿಗಳಲ್ಲಿ ಅಂತರ್ಜಲ ವೃದ್ಧಿಯಾಗಿ ತೋಟಗಾರಿಕೆ ಬೆಳೆಯನ್ನು ಹೆಚ್ಚಿನ ಪ್ರದೇಶದಲ್ಲಿ ಬೆಳೆದಿದ್ದು, ಇಳುವರಿಯಲ್ಲಿ ಏರಿಕೆ ಕಂಡಿದೆ.

ಸದಾ ಬರಗಾಲದ ಸುಳಿಗೆ ಸಿಲುಕುತ್ತಿದ್ದ ಮೊಳಕಾಲ್ಮೂರಿನಲ್ಲಿ ಮುಂಗಾರು ಮಳೆ ಅಬ್ಬರದಿಂದ ಹಿಂಗಾರಿನಲ್ಲಿ 1800ಕ್ಕೂ ಅಧಿಕ ಹೆಕ್ಟೇರ್‌ನಲ್ಲಿ ಹಣ್ಣು, ಹೂ ಬೆಳೆದು ಕೈತುಂಬಾ ಆದಾಯ ಗಳಿಸುವ ನಿರೀಕ್ಷೆಯಲ್ಲಿ ರೈತರು ಇದ್ದಾರೆ.

ಬಾಳೆ 80 ಎಕರೆ, ಪಪ್ಪಾಯಿ 50 ಹೆಕ್ಟೇರ್, ವಿವಿಧ ಹೂ 40 ಹೆ, ನುಗ್ಗೆ 35 ಹೆ, ಮೆನಸಿನಕಾಯಿ 350 ಹೆಕ್ಟೇರ್, ಹಿರೇಕಾಯಿ 90 ಎಕರೆ, ಟೊಮೊಟೊ 95 ಎಕರೆ, ಬದನೆ 150 ಎಕರೆಯಲ್ಲಿ ಬೆಳೆದಿದ್ದು, ಸಮೃದ್ಧ ಫಸಲು ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.50ರಷ್ಟು ಹೆಚ್ಚಳ ಕಂಡಿದೆ.

ಏಳೆಂಟು ವರ್ಷಗಳ ಕಾಲ ಬರ ಅನುಭವಿಸಿದ ರೈತರು, ಉತ್ತಮ ಮಳೆಯಿಂದ ಅಂತರ್ಜ ವೃದ್ಧಿಸಿರುವುದರಿಂದ ನಿಟ್ಟುಸಿರು ಬಿಡುವಂತಾಗಿದೆ. ಕೆರೆ ಕಟ್ಟೆಗಳಿಗೆ ಒಂದಿಷ್ಟು ನೀರು ಹರಿದು ಭೂಮಿ ತಂಪಾಗಿದ್ದು, ಕೊಳವೆಬಾವಿಗಳಲ್ಲಿ ಜಲಮರುಪೂರಣವಾಗಿದೆ. ಇದು ರೈತರಿಗೆ ಹರ್ಷ ಮೂಡಿಸಿದೆ.

ಈರುಳ್ಳಿ ಬೆಳೆಗಾರರಿಗೆ ಆಸೆ ಕೈಗೂಡುವುದೇ: ಉತ್ತರ ಕರ್ನಾಟಕದಲ್ಲಿ ಮಳೆ ನೀರಿನಲ್ಲಿ ಬೆಳೆ ಕೊಚ್ಚಿ ಹೋಗಿದ್ದರಿಂದ ಈರುಳ್ಳಿಗೆ 20 ಸಾವಿರ ರೂ. ದರ ಬಂದಿತ್ತು. ನಾವು ಕೈ ತುಂಬಾ ಹಣ ಎಣಿಸಬಹುದೆಂಬ ನಿರೀಕ್ಷೆಯಲ್ಲಿ ಹಿಂಗಾರಿಗೆ ಸೂಕ್ತವಲ್ಲದಿದ್ದರೂ ತಾಲೂಕಿನ ಬೆಳೆಗಾರರು, 150 ಹೆಕ್ಟೇರ್‌ನಲ್ಲಿ ಈರುಳ್ಳಿ ಬಿತ್ತನೆ ಮಾಡಿದ್ದಾರೆ. ಪ್ರಸ್ತುತ 1500ರಿಂದ 2 ಸಾವಿರ ರೂ. ಬೆಲೆ ಇದೆ. ಆದರೆ, ರೈತರ ಆಸೆ ಈಡೇರುವುದು ಸುಲಭವಾಗಿಲ್ಲ.

ತೋಟಗಾರಿಕೆ ಅಧಿಕಾರಿ ಲೋಕೇಶ್ ಹೇಳಿಕೆ: ಮಣ್ಣಿನ ಹವಾಗುಣಕ್ಕೆ ತಕ್ಕಂತೆ ಬೆಳೆ ಇಡುವ ಪದ್ಧತಿ ರೂಢಿಸಿಕೊಂಡು ಹನಿ ನೀರಾವರಿ ಅಳವಡಿಸಿಕೊಂಡು ಹಣ್ಣು, ಹೂ, ಕಾಯಿಪಲ್ಯ ಬೆಳೆದರೆ ನಷ್ಟದ ಮಾತೇ ಬರಲ್ಲ. ಆದಷ್ಟು ಮಿಶ್ರ ಬೆಳೆಗೆ ಒತ್ತು ಕೊಟ್ಟರೆ ಒಂದರಲ್ಲಿ ನಷ್ಟ ಕಂಡರೂ ಉಳಿದವು ಆದಾಯ ಕೊಡಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net